ಕೊರೋನಾದಿಂದ ಸುಮಾರು 577 ಮಕ್ಕಳು ಅನಾಥರಾಗಿದ್ದಾರೆ: ಸ್ಮೃತಿ ಇರಾನಿ

ನವದೆಹಲಿ, ಮೇ. 26: ದೇಶದಲ್ಲಿ ಸರಿಸುಮಾರು ಏಪ್ರಿಲ್ 1ರಿಂದ ಇಲ್ಲಿಯವರೆಗೆ 577 ಮಕ್ಕಳು ಕೊವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಮೀಕ್ಷೆಯ ಬಳಿಕ ವರದಿ ಉಲ್ಲೇಖಿಸಿ ಮಾತನಾಡಿದರು.

ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಈ ಮಕ್ಕಳನ್ನು ಎಂದಿಗೂ ಕೈಬಿಡಲಾಗಿಲ್ಲ. ಜಿಲ್ಲೆಯ ಅಧಿಕಾರಿಗಳು ಅವರ ರಕ್ಷಣೆ ಮಾಡುತ್ತಿದ್ದಾರೆ. ಮಕ್ಕಳಿಗೆ ಕೌನ್ಸಲಿಂಗ್ ಅಗತ್ಯವಿದ್ದರೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲು ತಂಡ ಸಿದ್ಧವಾಗಿದೆ. ಈ ಮಕ್ಕಳ ಕಲ್ಯಾಣಕ್ಕಾಗಿ ಹಣದ ಕೊರತೆ ಆಗುವುದಿಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೇಂದ್ರವು, ರಾಜ್ಯ ಮತ್ತು ಜಿಲ್ಲೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಈ ಮೂಲಕ ಮಕ್ಕಳನ್ನು ರಕ್ಷಿಸುತ್ತಿದೆ. ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಭೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅನಾಥ ಮಕ್ಕಳ ಪಾಲನೆ- ಪೋಷಣೆಗೆ ಪ್ರತಿ ಜಿಲ್ಲೆಗೆ 10 ಲಕ್ಷ ರೂಪಾಯಿ ತೆಗೆದಿರಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

Exit mobile version