ಸರ್ಕಾರಿ ಕಚೇರಿಗಳ ಮೇಲೆ ACB ದಾಳಿ, ಅಕ್ರಮಗಳ ಕಡಿವಾಣಕ್ಕೆ ಕ್ರಮ ?

ACB raids

 ಬೆಂಗಳೂರಿನ ಹಲವು ಸರ್ಕಾರಿ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಸಾಕಷ್ಟು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ಜಂಟಿ ಆಯುಕ್ತರ ಕಚೇರಿಗಳು, ರೆವಿನ್ಯೂ ವಿಭಾಗ, ಮೂಲ ಸೌಕರ್ಯ ವಿಭಾಗ, ಆರೋಗ್ಯ ವಿಭಾಗದ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಬಿಬಿಎಂಪಿಯ ಕಂದಾಯ, ಆರೋಗ್ಯ ವಿಭಾಗದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿರುವ ಸಂಬಂಧ ಎಸಿಬಿಗೆ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು ಅಕ್ರಮಗಳು ನಡೆದಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಮೂಲ ವರದಿ ತಯಾರಿಸಿ ನೀಡಿದ್ದರು. ವರದಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಸ್ವಯಂ ಪ್ರೇರಿತ ಕೇಸು ದಾಖಲಿಸಿರುವ ಎಸಿಬಿ ಅಧಿಕಾರಿಗಳು ಶುಕ್ರವಾರ ಏಕ ಕಾಲಕ್ಕೆ 27 ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.

ಬಿಬಿಎಂಪಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳ ವಿಚಾರಣೆ ನಡೆದಾಗ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದವು. ಕೆಲವು ಅಧಿಕಾರಿಗಳು ಹಣದಾಸೆಗೆ ಬಿಬಿಎಂಪಿ ನಿಯಮ ಗಾಳಿಗೆ ತೂರಿ ಅಕ್ರಮ ನಡೆದಿರುವುದು ಪ್ರಾಥಮಿಕ ವಿಚಾರಣೆ ವೇಳೆ ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಕಂದಾಯ ವಿಭಾಗ, ಆರೋಗ್ಯ ವಿಭಾಗ ಮತ್ತು ಮೂಲ ಸೌಕರ್ಯ ವಿಭಾಗದಲ್ಲಿ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ಕೆಲವು ಅಧಿಕಾರಿಗಳು ಓಡಿ ಹೋಗಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಬಿಬಿಎಂಪಿ ಮೇಲೆ ದಾಳಿ ನಡೆದಿದ್ದು, ಬಿಬಿಎಂಪಿ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.



Exit mobile version