ತಮಿಳುನಾಡಲ್ಲಿ ಕಮಲಕ್ಕೆ ಮತ್ತಷ್ಟು ಬಲ: ಬಿಜೆಪಿಯೊಂದಿಗೆ AISMK ಪಕ್ಷವನ್ನು ವಿಲೀನಗೊಳಿಸಿದ ನಟ ಶರತ್ ಕುಮಾರ್

Chennai: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಫ್ಯಾನ್ಸ್ ಕ್ಲಬ್ನ ಪ್ರಮುಖ ಮುಖಂಡರು, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇಂದು ಮತ್ತೋರ್ವ ಖ್ಯಾತ ನಟ ಶರತ್ ಕುಮಾರ್ ಬಿಜೆಪಿಗೆ ಮತ್ತಷ್ಟು ಬಲ ತುಂಬಿದ್ದಾರೆ. ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (AISMK) ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ.

ಎಐಎಸ್ಎಂಕೆ ಪದಾಧಿಕಾರಿಗಳು ಮತ್ತು ಬಿಜೆಪಿ (BJP) ತಮಿಳುನಾಡು ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಸಮ್ಮುಖದಲ್ಲಿ ಶರತ್ ಕುಮಾರ್ (Sharath Kumar) ತಮ್ಮ ಪಕ್ಷವನ್ನು ಕೇಸರಿ ಪಕ್ಷದೊಂದಿಗೆ ವಿಲೀನಗೊಳಿಸಿದರು.ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರತ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.

ಇನ್ನು 2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುವಂತೆ ಶರತ್ ಕುಮಾರ್  ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು. ಡಿಎಂಕೆ (DMK) ಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಟ ಶರತ್ ಕುಮಾರ್ ಅವರು ನಂತರ ರಾಜ್ಯಸಭಾ ಸ್ಥಾನ ತ್ಯಜಿಸಿ ಎಐಎಡಿಎಂಕೆ (AIADMK) ಸೇರಿದ್ದರು. ಅಂತಿಮವಾಗಿ 2007ರಲ್ಲಿ AISMK ಸ್ಥಾಪಿಸಿದ್ದರು.ಮತ್ತೊಂದೆಡೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಸಹಾಯಕಿ ವಿ.ಕೆ. ಶಶಿಕಲಾ (V K Shashikala) ಅವರ ಸೋದರಳಿಯ ಟಿಟಿವಿ ದಿನಕರನ್ ಅವರು ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.

ತಮ್ಮ  ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (AMMK) ಪಕ್ಷದಿಂದ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.ಕಳೆದ ಆರು ತಿಂಗಳಿನಿಂದ ಬಿಜೆಪಿಯೊಂದಿಗೆ ನಾನು ಸಂಪರ್ಕದಲ್ಲಿದ್ದು, ಈಗಾಗಲೇ ತಮ್ಮ ಬೇಡಿಕೆಗಳನ್ನು ಬಿಜೆಪಿಗೆ ಲಿಖಿತವಾಗಿ ತಿಳಿಸಿದ್ದೇವೆ ಎಂದು ದಿನಕರನ್ ಹೇಳಿದ್ದಾರೆ. 

Exit mobile version