ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ 8 ಮಂದಿ ಸಾವು

ಲಕ್ನೋ 04 : ಕೇಂದ್ರ ಸಚಿವನ ಮಗ ಕಾರು ಹತ್ತಿಸಿದ ಪರಿಣಾಮ ಉತ್ತರಪ್ರದೇಶದಲ್ಲಿ ಪ್ರತಿಭಟನಾನಿರತ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಆ ಕಾರಿನಲ್ಲಿದ್ದ ನಾಲ್ವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ಪ್ರತಿಭಟನೆ ನಡಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅವರ ಮಗ ಅಜಯ್ ಮಿಶ್ರಾ ಆಶಿಶ್ ಮಿಶ್ರಾ ಕಾರು ಹರಿಸಿ, ಇಬ್ಬರು ರೈತರನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಭಾರಿ ಆಕ್ರೋಶ ಮತ್ತು ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದೆ.


ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖಿಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿಬೇಕಿತ್ತು. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಉದ್ದೇಶಿಸಿದ್ದರು.

ಕೇಶವ ಪ್ರಸಾದ್ ಮೌರ್ಯ ಅವರನ್ನು ಬರಮಾಡಿಕೊಳ್ಳಲು ತೆರಳುತ್ತಿದ್ದ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಕಾರಿನ ಎದುರು ರೈತರು ಪ್ರತಿಭಟನೆ ನಡೆಸಿದರು. ಆಗ ಪ್ರತಿಭಟನಾನಿರತ ರೈತರ ಮೇಲೆಯೇ ನಿಷ್ಕರುಣೆಯಿಂದ ಆಶಿಶ್ ಕಾರು ಚಲಾಯಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ಇಬ್ಬರಲ್ಲ, ಮೂವರು ರೈತರು ಮರಣ ಹೊಂದಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟ ಆರೋಪಿಸಿದೆ. ಆದರೆ ಆಶಿಶ್ ಮಿಶ್ರಾ ಅವರೇ ಕಾರು ಹರಿಸಿದ್ದೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.

ನನ್ನ ಮಗ ಕಾರಿನಲ್ಲಿ ಇರಲಿಲ್ಲ. ರೈತರು ಪ್ರತಿಭಟನೆ ಮಾಡಬಹುದು ಎಂದು ಮೊದಲೇ ತಿಳಿದಿತ್ತು. ಆದರೆ ರೈತರ ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ಸೇರಿಕೊಂಡು ಬಿಜೆಪಿ ಕಾರ್ಯಕರ್ತರಿದ್ದ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದರು ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ. ಸಚಿವರ ಮಗನ ಮೇಲೆ ಎಫ್‍ಐಆರ್ ದಾಖಲಿಸಿ ಬಂಧಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ಇತ್ತ ಹಿಂಸಾಚಾರವನ್ನು ಖಂಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಮತ್ತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

Exit mobile version