ಅಘ್ಘಾನಿಸ್ತಾನದಲ್ಲಿ(Afghansithan) ತಲೆಮರೆಸಿಕೊಂಡಿದ್ದ ಅಲ್‌ಖೈದಾ(Al-Qeada) ಮುಖ್ಯಸ್ಥ 71 ವರ್ಷದ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ(America) ಸೇನೆ ಡ್ರೋನ್(Drone) ದಾಳಿ ಮೂಲಕ ಹತ್ಯೆಗೈದಿದೆ. ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧದ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತು ಅಧ್ಯಕ್ಷ ಜೋ ಬೈಡನ್(Joe Biden) ಘೋಷಣೆ ಮಾಡಿದ್ದಾರೆ. ಅಯ್ಮನ್ ಅಲ್-ಜವಾಹಿರಿ, ಸೆಪ್ಟೆಂಬರ್ 11, 2001ರ ವಿಶ್ವ ವಾಣಿಜ್ಯ ಸಂಸ್ಥೆ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ.

ಈ ದಾಳಿ ನಡೆದ ಬರೋಬ್ಬರಿ 21 ವರ್ಷಗಳ ಬಳಿಕ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ(Kabul) ನಡೆಸಿದ ಡ್ರೋನ್ ದಾಳಿಯಲ್ಲಿ ಜವಾಹಿರಿಯನ್ನು ಹತ್ಯೆಗೈಯುವಲ್ಲಿ ಅಮೆರಿಕ ಯಶಸ್ವಿಯಾಗಿದೆ.
“ಜವಾಹಿರಿಯ ಸಾವಿನೊಂದಿಗೆ ಅಮೆರಿಕದ ವಾಣಿಜ್ಯ ಸಂಸ್ಥೆ ಮೇಲಿನ ದಾಳಿಯಲ್ಲಿ ಕೊಲ್ಲಲ್ಪಟ್ಟ 3,000 ಜನರ ಕುಟುಂಬಗಳಿಗೆ ನ್ಯಾಯ ಸಿಕ್ಕಿದೆ” ಎಂದು ಭಾವಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಟಿವಿ ಸಂದೇಶದಲ್ಲಿ ತಿಳಿಸಿದ್ದಾರೆ. ಅಂದಹಾಗೆ, ಈ ದಾಳಿ ನಡೆದಿದ್ದು, ಜುಲೈ 31 ರಂದು. ಎರಡು ಹೆಲ್‌ಫೈರ್ ಕ್ಷಿಪಣಿ ದಾಳಿಗೆ ಗುರಿಯಾದಾಗ 71 ವರ್ಷದ ಜವಾಹಿರಿ ತನ್ನ ಕಾಬೂಲ್ ನಿವಾಸದ ಬಾಲ್ಕನಿಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಜುಲೈ 25 ರಂದು ಈ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ. ಈ ದಾಳಿಯ ಕೆಲವೊಂದು ಫೋಟೋಗಳೂ ಲಭ್ಯವಾಗಿದ್ದು, ಕಟ್ಟಡದ ಸ್ಪಷ್ಟವಾದ ಚಿತ್ರಗಳು ಹೊರಬಿದ್ದಿವೆ. ಇದರಲ್ಲಿ ಒಂದು ಮಹಡಿಯ ಕಿಟಕಿ ಸ್ಫೋಟಿಸಿರುವುದು ಕಾಣಿಸುತ್ತಿದೆ, ಆದರೆ ಕಟ್ಟಡದ ಉಳಿದ ಭಾಗವು ಯಾವುದೇ ಹಾನಿಗೊಳಗಾಗದೆ ಹಾಗೇ ಇದೆ. ದಾಳಿ ವೇಳೆ ಜವಾಹಿರಿ ಕುಟುಂಬದ ಸದಸ್ಯರು ಮನೆಯಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದ್ದು, ‘ಉದ್ದೇಶಪೂರ್ವಕವಾಗಿ ಅವರನ್ನು ಗುರಿಯಾಗಿಸಿರಲಿಲ್ಲ ಮತ್ತು ಹಾನಿ ಮಾಡಿಲ್ಲ,’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಕಾಬೂಲ್‌ನಲ್ಲಿ ಭಾನುವಾರ ದಾಳಿ ನಡೆದಿರುವುದನ್ನು ಖಚಿತಪಡಿಸಿದರು. ಹಾಗೆಯೇ, ಅಮೆರಿಕದ ಕಾರ್ಯಾಚರಣೆಯನ್ನು ಬಲವಾಗಿ ಖಂಡಿಸಿರುವ ಅವರು, ‘ಇದು ಅಂತರರಾಷ್ಟ್ರೀಯ ತತ್ವಗಳ ಉಲ್ಲಂಘನೆ’ ಎಂದಿದ್ದಾರೆ.
- ಪವಿತ್ರ