ಯೋಗದ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ಮುಂದಾದ ಅಮೆರಿಕದ ಪುಟ್ಟ ರಾಜ್ಯ ಅಲಬಾಮಾ

ಅಮೆರಿಕ, ಮಾ. 13: ಇಲ್ಲಿನ ಆಗ್ನೇಯಲ್ಲಿರುವ ಒಂದು ರಾಜ್ಯ ಅಲಬಾಮಾ. ಅಲ್ಲಿ ಸುಮಾರು ಮೂರು ದಶಕಗಳಿಂದ ಭಾರತೀಯ ಮೂಲದ ಯೋಗಾಭ್ಯಾಸವನ್ನು ನಿಷೇಧಿಸಲಾಗಿತ್ತು. ಜೊತೆಗೆ ನಮಸ್ತೆ ಎಂಬ ಶುಭಾಶಯದ ಪದವನ್ನೂ ಬಳಸಬಾರದು ಎಂದು ಅಲ್ಲಿನ ರಾಜ್ಯ ಸರ್ಕಾರ ಕಟ್ಟಪ್ಪಣೆ ವಿಧಿಸಿತ್ತು. ಕ್ರೈಸ್ತ ಮೂಲವಾದಿಗಳ ಒತ್ತಡ, ಒತ್ತಾಯದ ಕುಮ್ಮಕ್ಕಿನಿಂದ ಅಲಬಾಮಾ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿತ್ತು. ಯೋಗ ಅಷ್ಟೇ ಅಲ್ಲ; ಮಂತ್ರ ಪಠಣ, ಧ್ಯಾನ ಮತ್ತು ಸಮ್ಮೋಹನ ಶಾಸ್ತ್ರಕ್ಕೂ (ಹಿಪ್ನಾಸಿಸ್) ಅಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಅಮೆರಿಕಾದ ಅಲಬಾಮಾ ಸರ್ಕಾರ ಇನ್ನು ತನ್ನ ರಾಜ್ಯದಲ್ಲಿ ಯೋಗಾಭ್ಯಾಸಕ್ಕೆ ಯಾವುದೇ ಕಡಿವಾಣ ಹಾಕುವುದಿಲ್ಲ. ಜನ ನಿಶ್ಚಿಂತೆಯಿಂದ ಯೋಗ ಮಾಡುತ್ತಾ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದೆ. ಅದಕ್ಕೂ ಮುನ್ನ, 1993ರಲ್ಲಿ ಯಾವ ಮೂಲಭೂತವಾದಿಗಳ ಹಠದಿಂದಾಗಿ ಯೋಗ ನಿಷೇದ ಕಾನೂನನ್ನು ಜಾರಿಗೆ ತಂದಿತ್ತೋ ಅದನ್ನು ನಿರ್ಜೀವಗೊಳಿಸಲು ಹೊಸ ಕಾನೂನು ತರುತ್ತಿದೆ ಎಂದು ಹೇಳಿದೆ.

ಇಡೀ ವಿಶ್ವಕ್ಕೆ ಅನ್ವಯವಾಗುವಂತೆ ಭಾರತವು ವಿಶ್ವ ಯೋಗ ದಿನ ಘೋಷಿಸಿದ ಬಳಿಕ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಭಾರತದ ಯೋಗಕ್ಕೆ ಮನ್ನಣೆ ಸಿಗುತ್ತಿದೆ. ವಿಶ್ವ ಸಂಸ್ಥೆಯೂ ಇದಕ್ಕೆ ಕೈಜೋಡಿಸಿದೆ. 2015ರಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು. ಅಂದಿನಿಂದ ಯೋಗದ ಬಗ್ಗೆ ಇಡೀ ವಿಶ್ವವೇ ಅಪಾರ ವಿಶ್ವಾಸ ಹೊಂದತೊಡಗಿದೆ. ಮನುಷ್ಯ ತನ್ನ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ಉತ್ತಮ ಸಾಧನ ಎಂಬುದನ್ನು ಕಂಡುಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ವಿಶ್ವದ ಯಾವುದೋ ಒಂದು ರಾಜ್ಯ ತಾನಿನ್ನೂ ಯೋಗಕ್ಕೆ ಕಡಿವಾಣ ಹಾಕುತ್ತೇನೆ ಎಂದು ಹೇಳಿದರೆ ಹೇಗೆ ಎಂದು ಜನ ಮಾತನಾಡಿಕೊಳ್ಳುತ್ತಿರುವಾಗಲೇ ಈ ರಾಜ್ಯ ಎಚ್ಚೆತ್ತುಕೊಂಡಿದೆ.

ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಅಲಬಾಮಾ ರಾಜ್ಯ ಸರ್ಕಾರ ಯೋಗಾಭ್ಯಾಸ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ಮುಂದಾಗಿರುವುದರ ಮಧ್ಯೆ ಯೋಗಾಭ್ಯಾಸದ ವೇಳೆ ಪ್ರಯೋಗಿಸುವ ಸಂಸ್ಕೃತ ಪದಗಳ ಬಳಕೆಯನ್ನು ನಿಷೇಧಿಸಿದೆ. ಅಂತಹ ಪದಗಳೆಲ್ಲ ಆಂಗ್ಲಭಾಷೆಯಲ್ಲಿಯೇ ಇರಬೇಕು ಎಂದು ಪಟ್ಟುಹಿಡಿದಿದೆ! ಕೊನೆಗೆ ನಮಸ್ತೆ ಎಂಬ ಸದಾಶಯದ ಪದವನ್ನೂ ಬಳಸುವಂತಿಲ್ಲ ಎಂದು ಸಾರಿದೆ.

ಅಲಬಾಮಾ ರಾಜ್ಯದ ಜನಪ್ರತಿನಿಧಿಗಳ ಕೆಳಮನೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, ಮೇಲ್ಮನೆಯಲ್ಲಿಯೂ ಅಂಗೀಕಾರಗೊಂಡು ಶಾಸನವಾಗಬೇಕಿದೆ. ನಾನೇ ಐದಾರು ವರ್ಷಗಳಿಂದ ಯೋಗ ಮಾಡುತ್ತಾ ಬಂದಿದ್ದೇನೆ. ಯೋಗ ಅಂದರೆ ಅದು ಹಿಂದೂ ಸಂಸ್ಕೃತಿಯಿಂದ ಬಂದಿದ್ದು. ಹಾಗಾಗಿ ಅದನ್ನು ನಿಷೇಧಿಸಬೇಕು ಎಂಬ ವಾದವನ್ನು ನಾನು ಖಂಡಿತಾ ಒಪ್ಪುವುದಿಲ್ಲ. ಇನ್ನು ಮುಂದಾದರೂ ಯೋಗವನ್ನು ನಾವು ಒಪ್ಪಿಕೊಂಡು, ಅಪ್ಪಿಕೊಳ್ಳೋಣ ಎಂದು ಅಲ್ಲಿನ ಜನಪ್ರತಿನಿಧಿ ಜೆಮ್ಮಿ ಗ್ರೆ ಕಿವಿಮಾತು ಹೇಳಿದ್ದಾರೆ.

Exit mobile version