ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯಾಗಿಸುವ ಇಚ್ಛೆ ಅಂಬೇಡ್ಕರ್ ಅವರಿ​ಗಿತ್ತು: ನ್ಯಾಯಮೂರ್ತಿ ಬೋಬ್ಡೆ

ಮುಂಬೈ, ಏ. 15: ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಕೃತವನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಸ್ತಾವನೆ ಇಟ್ಟಿದ್ದರು ಎಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಹೇಳಿದರು.

ಮಹಾರಾಷ್ಟ್ರ ಕಾನೂನು ವಿಶ್ವವಿದ್ಯಾಲಯದ ನೂತನ ಕಟ್ಟಡವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕೃತವನ್ನೇ ಭಾರತದ ಅಧಿಕೃತ ಭಾಷೆಯನ್ನಾಗಿಸಲು ಕೆಲವು ಮುಸ್ಲಿಂ ಮತ್ತು ಹಿಂದೂ ಧಾರ್ಮಿಕ ಮುಖಂಡರ ಒಪ್ಪಿಗೆಯನ್ನೂ ಡಾ.ಅಂಬೇಡ್ಕರ್ ಪಡೆದಿದ್ದರು. ಅಲ್ಲದೆ, ಸ್ವತಃ ತಾವೂ ಈ ಪ್ರಸ್ತಾವನೆಗೆ ಸಹಿ ಹಾಕಿದ್ದರು ಎಂದು ನ್ಯಾಯಮೂರ್ತಿ ಬೋಬ್ಡೆ ತಮ್ಮ ಭಾಷಣದಲ್ಲಿ ಹೇಳಿದರು.

ಉತ್ತರ ಭಾರತೀಯರ ಮತ್ತು ದಕ್ಷಿಣ ಭಾರತೀಯರ ನಡುವಿನ ಭಾಷಾ ಅಸಮಾಧಾನವನ್ನು ಹೋಗಲಾಡಿಸಲು, ಸಾಮರಸ್ಯ ಮೂಡಿಸಲು ಸಂಸ್ಕೃತವನ್ನು ಬಳಸಿಕೊಳ್ಳಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ಉತ್ತರ ಭಾರತೀಯರು ತಮಿಳು ಭಾಷೆಯನ್ನು ವಿರೋಧಿಸುತ್ತಾರೆ. ಹಾಗೆಯೇ ದಕ್ಷಿಣ ಭಾರತೀಯರು ಹಿಂದಿಯನ್ನು ಅಷ್ಟೇ ಉಗ್ರವಾಗಿ ವಿರೋಧಿಸುತ್ತಾರೆ. ಉತ್ತರ ಮತ್ತು ದಕ್ಷಿಣ ಭಾರತೀಯರ ನಡುವೆ ಸಾಮರಸ್ಯ ಸಾಧಿಸಲು ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯನ್ನಾಗಿ ರೂಪಿಸುವ ಇಚ್ಛೆಯನ್ನು ಬಿ.ಆರ್.ಅಂಬೇಡ್ಕರ್​ ಹೊಂದಿದ್ದರು ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಭಾಷಣದಲ್ಲಿ ವಿವರಿಸಿದರು.

Exit mobile version