ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಅಮಿತ್ ಶಾ ಸೂಚನೆ!

amit shah

ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಗುತ್ತಿಗೆದಾರ(Contractor) ಮತ್ತು ಬೆಳಗಾವಿ(Belagavi) ಬಿಜೆಪಿ(BJP) ಕಾರ್ಯಕರ್ತ ಸಂತೋಷ ಪಾಟೀಲ್(Santhosh Patil) ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಕೆ.ಎಸ್ ಈಶ್ವರಪ್ಪ(KS Eshwarappa) ಅವರಿಂದ ರಾಜೀನಾಮೆ(Resign) ಪಡೆಯುವಂತೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಸೂಚಿಸಿದೆ ಎನ್ನಲಾಗಿದೆ. ಸೂಚನೆ ದೊರೆತ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಮಂಗಳೂರು ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಇನ್ನೊಂದೆಡೆ ಸಚಿವ ಕೆ.ಎಸ್ ಈಶ್ವರಪ್ಪ ಕೂಡಾ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದು, ಬಿಜೆಪಿಯ ಕೆಲ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ಈ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ಕೂಡಲೇ ಈ ಪ್ರಕರಣವನ್ನು ಸರಿಪಡಿಸುವಂತೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಹೀಗಾಗಿ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡ ನಂತರ ಕೂಡಲೇ ರಾಜೀನಾಮೆ ಪಡೆಯುವಂತೆ ಅಮಿತ್ ಶಾ ಸೂಚಿಸಿದ್ದಾರೆ.

ಈ ಪ್ರಕರಣದಿಂದ ಪಕ್ಷದ ಮೇಲಾಗುವ ಪರಿಣಾಮದ ಬಗ್ಗೆಯೂ ಗಂಭೀರ ಚರ್ಚೆ ನಡೆಸಿದ್ದಾರೆ. ಮುಂದಿನ ವರ್ಷ ಚುನಾವಣೆ ಇದ್ದು, ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸಂತೋಷ್ ಅವರು ರಾಜ್ಯಕ್ಕೆ ಆಗಮಿಸಿ ಸಭೆ ನಡೆಸಲು ಅಮಿತ್ ಶಾ ಸೂಚಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನೇ ಆತ್ಮಹತ್ಯೆ ಮಾಡಿಕೊಂಡಿರುವುದು ಅಮಿತ್ ಶಾ ಕೋಪಕ್ಕೆ ಕಾರಣವಾಗಿದೆ.

ಕೆ.ಎಸ್ ಈಶ್ವರಪ್ಪ ವಿರುದ್ದ ಅಮಿತ್ ಶಾ ಗರಂ ಆಗಿದ್ದಾರೆ. ನಮ್ಮ ಕಾರ್ಯಕರ್ತರನ್ನೇ ನಾವು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ, ಪಕ್ಷ ಸಂಘಟನೆ ಹೇಗಾಗಲಿದೆ. ಸಂತೋಷ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಸೂಚನೆ ನೀಡಲಾಗಿದೆ.

Exit mobile version