ನಮ್ಮ ದೇಶದಲ್ಲಿ ಇಲ್ಲ ವಿಶ್ವದ ಅತೀ ದೊಡ್ಡ ಹಿಂದೂ ದೇವಾಲಯ ; ಹಾಗಾದ್ರೆ ಯಾವ ದೇಶದಲ್ಲಿದೆ? ಇಲ್ಲಿದೆ ಉತ್ತರ!

Angokar wat

ಕಾಂಬೋಡಿಯಾ(Combodia). ಭಾರತದಿಂದ ಸುಮಾರು ಐದು ಸಾವಿರ ಕಿಲೋಮೀಟರ್ ದೂರದಲ್ಲಿರುವ ದೇಶವಿದು.

ಇಲ್ಲಿ ಒಂದು ಕಾಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಇದ್ದರು ಎಂಬುದಕ್ಕೆ ಈಗಲೂ ಅದೆಷ್ಟೋ ಸಾಕ್ಷಿಗಳಿವೆ.

ಅದೂ ಅಲ್ಲದೆ, ವಿಶ್ವದ ಅತೀ ದೊಡ್ಡ ಹಿಂದೂ ದೇಗುಲ ಸಂಕೀರ್ಣ ಇರುವುದು ಇದೇ ಕಾಂಬೋಡಿಯಾದಲ್ಲಿ. ಅದೇ ಅಂಕೋರ್ ವಾಟ್ ದೇಗುಲ. ಇದು ಅತ್ಯಂತ ಸುಂದರ ದೇಗುಲ. 12ನೇ ಶತಮಾನದಲ್ಲಿ ನಿರ್ಮಾಣವಾದ ದೇಗುಲ ತನ್ನ ಅಪೂರ್ವ ವಾಸ್ತುಶಿಲ್ಪದಿಂದಲೂ ಎಲ್ಲರನ್ನೂ ಕೈಬೀಸಿ ಕರೆಯುವಂತಿದೆ. ಇದು ಒಂದು ಕಾಲದಲ್ಲಿ ಅತ್ಯಂತ ವೈಭವದ ದಿನಗಳನ್ನು ಕಂಡಿದ್ದ ದೇಗುಲ ಎಂಬುದರಲ್ಲಿ ಎಳ್ಳಷ್ಟು ಸಂಶಯಬಾರದು. ಅದಕ್ಕೆ ಕಾರಣ ಈ ದೇಗುಲದ ಸೌಂದರ್ಯ. ವಿಸ್ತಾರ, ಕಲೆಯ ಸೊಬಗು.

ಭಗವಾನ್ ವಿಷ್ಣು ಇಲ್ಲಿನ ಪ್ರಧಾನ ದೇವರು. ಈ ದೇಗುಲ ಕಾಂಬೋಡಿಯವನ್ನೂ ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ವಿಶ್ವ ಪಾರಂಪರಿಕಾ ತಾಣದ ಪಟ್ಟ ಸಿಕ್ಕ ಮೇಲಂತೂ ಇಲ್ಲಿನ ಸೌಂದರ್ಯ ಸವಿಯಲು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ. ಹಾಲಿವುಡ್‌ನ ಹಲವು ಸಿನೆಮಾಗಳೂ ಇಲ್ಲಿ ಶೂಟಿಂಗ್ ಆಗಿದ್ದವು. ರಾಜಾ ಸೂರ್ಯವರ್ಮನ್ ದ್ವಿತೀಯ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ದೇಗುಲ ಇದು. ಆಗ ಈ ಪ್ರದೇಶ ಯಶೋಧರಾಪುರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಆಗ ಕಾಂಬೋಡಿಯವನ್ನೂ ಕಂಬುಜ್ ಎಂದು ಕರೆಯಲಾಗುತ್ತಂತೆ.

ದೊರೆತಿರುವ ಮಾಹಿತಿ ಪ್ರಕಾರ ಈ ಭವ್ಯ ದೇಗುಲದ ನಿರ್ಮಾಣಕ್ಕೆ 37 ವರ್ಷ ಹಿಡಿದಿತ್ತಂತೆ. ತ್ರಿಮೂರ್ತಿಗಳನ್ನು ಆರಾಧಿಸುತ್ತಿದ್ದ ದೇಗುಲವಿದು. ಇಲ್ಲಿ ವಿಷ್ಣುವಿನ ಜೊತೆಗೆ ಬ್ರಹ್ಮ ಮತ್ತು ಮಹೇಶ್ವರರ ಪೂಜೆಯೂ ನಡೆಯುತ್ತಿತ್ತು. ಅಂದು ಈ ದೇಗುಲ ಕಾಂಬೋಡಿಯಾದ ರಾಜಧಾನಿಯ ಸಿರಿವಂತಿಕೆ, ವೈಭವಕ್ಕೆ ಸಾಕ್ಷಿಯಂತಿತ್ತು. ರಾಮಾಯಾಣ, ಮಹಾಭಾರತ ಸೇರಿದಂತೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅಪೂರ್ವ ಶಿಲ್ಪಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿನ ಕಣಕಣದಲ್ಲೂ ಭಾರತೀಯ ಕಲೆ ಸಂಸ್ಕೃತಿಯ ದರ್ಶನವಾಗುತ್ತದೆ. 
ಹೀಗೆ ಈ ದೇಗುಲ ಎಷ್ಟು ಅಪೂರ್ವವೂ, ಸುಂದರವಾಗಿಯೂ ಇದೆಯೋ ಅಷ್ಟೇ ಇದು ರಹಸ್ಯಮಯ ಕೂಡಾ ಆಗಿದೆ. ಯಾಕೆಂದರೆ, ಅದೆಷ್ಟೋ ರಹಸ್ಯಗಳನ್ನು ಈ ದೇಗುಲ ತನ್ನೊಡಲಿನಲ್ಲಿ ಇಂದಿಗೂ ಬಚ್ಚಿಟ್ಟುಕೊಂಡಿದೆ. ಈಗಲೂ ಇಲ್ಲಿಗೆ ಬರುವ ಸಾವಿರಾರು ಪ್ರವಾಸಿಗರು ಈ ದೇಗುಲದ ಸೌಂದರ್ಯಕ್ಕೇ ಮಂತ್ರಮುಗ್ಧರಾಗುತ್ತಾರೆ. ಈ ದೇಗುಲವನ್ನು ಕಂಡಾಗ ಇಂತಹ ಅಪೂರ್ವ ತಾಣ ಈ ಭೂಮಿ ಮೇಲೆ ಇದೆಯಾ? ಇದನ್ನು ಮನುಷ್ಯರಿಂದ ನಿರ್ಮಿಸಲು ಸಾಧ್ಯನಾ? ಎಂಬ ಸಂಶಯ ಮೂಡಿದರೂ ಅದು ಅಚ್ಚರಿಯಲ್ಲ, ಅತಿಶಯೋಕ್ತಿಯೂ ಅಲ್ಲ. 

ಆದರೆ, ಈ ಸೌಂದರ್ಯ ರಾಶಿಯ ನಡುವೆ ಇಲ್ಲಿ ಈಗಲೂ ಹಿಂದಿನ ಕಾಲದ ಖಜಾನೆ ಇದೆ ಎಂಬ ನಂಬಿಕೆ ಇದೆ. ಒಂದಷ್ಟು ಪುರಾತತ್ವ ತಜ್ಞರೂ ಇಲ್ಲಿ ಖಜಾನೆ ಇರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕಾಂಬೋಡಿಯಾ ಸರ್ಕಾರ ಈ ಖಜಾನೆ ಶೋಧಕ್ಕೆ ಅಷ್ಟಾಗಿ ಮನಸ್ಸು ಮಾಡಿಲ್ಲ. ಕಾರಣ, ಎಷ್ಟೋ ವರ್ಷಗಳ ಕಾಲ ಕಾಡಿನಲ್ಲಿ ಮರೆಯಾಗಿದ್ದ ಈ ದೇಗುಲ ಮರಳಿ ಕಾಣಸಿಕ್ಕಿದೆ. ಈಗ ಈ ಖಜಾನೆ ಶೋಧಕ್ಕಿಳಿದರೆ ಈ ದೇಗುಲಕ್ಕೇನಾದರೂ ತೊಂದರೆಯಾದರೆ ಎಂಬ ಸಹಜ ಭಯ ಸರ್ಕಾರದ್ದು. ಅದು ನಿಜ ಕೂಡಾ. ಐತಿಹಾಸಿಕ ಮಹತ್ವವುಳ್ಳ ಈ ದೇಗುಲಕ್ಕಿಂತ ಬೇರೆ ಖಜಾನೆ ಬೇಕಾಗಿಲ್ಲ.

ಇದೇ ಪ್ರತ್ಯಕ್ಷ ಖಜಾನೆ. ಈ ಕಾರಣಕ್ಕೆ ಈ ಭವ್ಯ ದೇಗುಲದ ರಕ್ಷಣೆಯ ಸಲುವಾಗಿ ಸರ್ಕಾರ ಕೂಡಾ ಸಂಪತ್ತಿನ ಶೋಧದತ್ತ ಅಷ್ಟೇನು ಆಸಕ್ತಿ ವಹಿಸಿಲ್ಲ. ಹೀಗಾಗಿ, ಆ ಗುಪ್ತನಿಧಿಯ ವಿಚಾರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪ್ರಶ್ನೆಯಾಗಿಯೇ ಕಾಡುತ್ತಿದೆ.
Exit mobile version