ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳು ಕೂಲ್ ಕೂಲ್: ಬಿಸಿಲ ತಾಪ ತಗ್ಗಿಸಲು ಸ್ಪ್ರಿಂಕ್ಲರ್ ಅಳವಡಿಕೆ

ಮೈಸೂರು ಮಾ 20: ಬೇಸಿಗೆಯ ಬಿಸಿ ಹೆಚ್ಚಾಗಿದ್ದು. ಮೈಸೂರಿನಲ್ಲಿ ಸೂರ್ಯನ ಪ್ರಖರತೆ ಮಿತಿಮೀರಿ ದಿನೇದಿನೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯದಲ್ಲಿ ವನ್ಯಜೀವಿಗಳು ಕೂಲ್ ಆಗಲು ವಾಟರ್ ಸ್ಪ್ರಿಂಕ್ಲರ್ ನಿರ್ಮಿಸಲಾಗಿದೆ.

ದಿನೇ ದಿನೇ ಹೆಚ್ಚುತ್ತಿರುವ ಉಷ್ಣಾಂಶದಿಂದ ಪ್ರಾಣಿಗಳನ್ನ ಬಿಸಿಲಿನ ತಾಪದಿಂದ ತಪ್ಪಿಸಲು ನೀರಿನ ಸಿಂಪಡಣೆ ಮಾಡಲಾಗಿದ್ದು, ನೀರಿನಲ್ಲಿ ಚಿನ್ನಾಟವಾಡ್ತಾ ಬೇಸಿಗೆಯ ಬೇಗೆಯಿಂದ ಪ್ರಾಣಿಗಳು ರಿಲ್ಯಾಕ್ಸ್ ಆಗುತ್ತಿವೆ. ನೀರು ಸಿಂಪಡಣೆ ಜೊತೆಗೆ ಪ್ರಾಣಿಗಳಿಗೆ ದ್ರವ ಆಹಾರವನ್ನು ವಿತರಣೆ ಮಾಡಲಾಗುತ್ತಿದ್ದು, ಬಿಸಿಲಿನಿಂದ ವನ್ಯಜೀವಿಗಳು ಕೂಲ್ ಆಗಿರುವಂತೆ ಮೃಗಾಲಯ ಸಿಬ್ಬಂದಿ ಕ್ರಮವಹಿಸಿದ್ದಾರೆ.

ಬಿಸಿಲಿನಿಂದ ವನ್ಯಜೀವಿಗಳು ಬಳಲಬಾರದು ಎಂಬ ಉದ್ದೇಶದಿಂದ ಎಳನೀರು, ತಾಜಾ ಹಣ್ಣಿನ ರಸ ನೀಡುವುದರೊಂದಿಗೆ ಮಣ್ಣಿನ ಬಾತ್ ಮೂಲಕ ವಿಶೇಷ ಆರೈಕೆ ಮಾಡಲಾಗುತ್ತಿದೆ. ಪ್ರಾಣಿ ಪಕ್ಷಿಗಳ ಗೂಡುಗಳಲ್ಲಿ ನೀರಿನ ಕೊಳ, ನೆರಳು ಇರುವಂತೆ ನೋಡಿಕೊಳ್ಳಲಾಗುತ್ತಿದೆ.
ಪ್ರತಿಸಲಕ್ಕಿಂತ ಈ ಬಾರಿ ಬೇಸಿಗೆಯ ಬಿಸಿ ತೀವ್ರವಾಗಿದೆ. ಪ್ರತಿ ವರ್ಷ ಬೇಸಿಗೆ ಬಂದರೆ ಮೈಸೂರು ಮೃಗಾಲಯ ಸೇರಿದಂತೆ ಎಲ್ಲಾ ಝೂಗಳಲ್ಲಿ ಪ್ರಾಣಿ, ಪಕ್ಷಿಗಳ ಆರೈಕೆ ಬಗ್ಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

ಈ ಬಾರಿ ಮೈಸೂರಿನಲ್ಲಿ ದಾಖಲೆ ಮಟ್ಟದಲ್ಲಿ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿರುವುದನ್ನು ಮನಗಂಡಿರುವ ಮೃಗಾಲಯ ಅಧಿಕಾರಿಗಳು, ಪ್ರಾಣಿಗಳ ಜೊತೆ ಪ್ರವಾಸಿಗರಿಗೂ ತಂಪಾದ ಅನುಭವ ನೀಡುವ ಪರಿಸರ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಬೇಸಿಗೆ ಬೇಗೆ ಪ್ರಾಣಿಗಳ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ ಪ್ರಾಣಿ, ಪಕ್ಷಿಗಳಿಗೆ ನೀಡುವ ಆಹಾರದಲ್ಲಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ನಿಯಮಿತವಾಗಿ ನೀಡುವ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಪ್ರಾಣಿ-ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡುವ ಪದಾರ್ಥಗಳನ್ನೇ ಆಹಾರವಾಗಿ ನೀಡಲಾಗುತ್ತಿದೆ.

Exit mobile version