ಪ್ರಧಾನಿ ಮೋದಿ ಶೌಚಾಲಯಗಳನ್ನು ಕಟ್ಟಿಸಿಕೊಟ್ಟರು ಕಾಂಗ್ರೆಸ್ಸಿಗರು ಮಾತ್ರ ಚೊಂಬು ಹಿಡಿದುಕೊಂಡು ಓಡಾಡ್ತಿದ್ದಾರೆ: ಅಣ್ಣಾಮಲೈ

Bengaluru: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ (Loksabha Election) ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿವೆ. ಕೇಂದ್ರ ಸರ್ಕಾರ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡದೆ ಸತಾಯಿಸುತ್ತಿರುವ ಕಾರಣ ನೀಡಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಿನೂತನವಾಗಿ ‘ಚೊಂಬು’ ಹಿಡಿದು ಪ್ರತಿಭಟನೆ ನಡೆಸುತ್ತಿದೆ. ಈಗಾಗಲೇ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿ ಕೇಂದ್ರ ಸರ್ಕಾರದ (Central Government) ವಿರುದ್ಧ ವಾಗ್ದಾಳಿ ನಡೆಸಿದೆ.

ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ, ಮೋಸ ಮಾಡುತ್ತಿದೆ. ಸಾಕಷ್ಟು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ಖಾಲಿ ಚೊಂಬು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದೆ.

ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಹೋದ ಕಡೆ ಬಂದ ಕಡೆ ಚೊಂಬು ಹಿಡಿದು ಬಿಜೆಪಿಯ (BJP) ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ನೋಡಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.

ಮೊನ್ನೆ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ (Brijesh Chouta) ಪರ ಪ್ರಚಾರ ನಡೆಸಿದರು. ನಿನ್ನೆ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭೆ ಅಭ್ಯರ್ಥಿ ತೇಜಸ್ವಿ ಸೂರ್ಯ (Tejaswi Surya) ಪರ ರೋಡ್ ಶೋ ನಡೆಸಿದ ನಂತರ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅಣ್ಣಾಮಲೈ ಪ್ರಚಾರ ಸಂದರ್ಭದಲ್ಲಿ ನಾನು ಹೋದ ಕಡೆಗಳಲ್ಲೆಲ್ಲ ನಾಲ್ಕು ಚೊಂಬು ಹಿಡಿದುಕೊಂಡು ಬಂದಿದ್ದರು. ಅದಕ್ಕೆ ನಾನು ಕಾರ್ಯಕರ್ತರನ್ನು ಪ್ರಶ್ನಿಸಿದೆ. ರಾಜ್ಯದಲ್ಲಿ ಯಾಕೆ ಎಲ್ಲರೂ ಚೊಂಬು ಹಿಡಿದುಕೊಂಡು ಓಡಾಡ್ದಿದ್ದಾರೆ.

ಯಾಕೆ, ಯಾರೂ ಶೌಚಾಲಯಗಳಿಗೆ ಹೋಗುತ್ತಿಲ್ಲವೇ? ಪ್ರಧಾನಿ ಮೋದಿ ಅವರು ದೇಶಾದ್ಯಂತ 11 ಕೋಟಿ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ಸಿಗರು (Congress) ಮಾತ್ರ ಚೊಂಬು ಹಿಡಿದುಕೊಂಡು ಓಡಾಡ್ತಿದ್ದಾರೆ. ಇವರಿಗೆ ಶೌಚಾಲಯದ ಮಹತ್ವ ತಿಳಿದಿಲ್ಲವೇ ಎಂದು ವ್ಯಂಗ್ಯಾಡಿದ್ದಾರೆ.

Exit mobile version