ರಾಜ್ಯದಲ್ಲಿ ಮತ್ತೊಂದು ಗಣಿ ಸ್ಪೋಟ ದುರಂತ: ಹೀರೆನಾಗವೇಲಿಯಲ್ಲಿ ಜಿಲೆಟಿನ್ ಸ್ಪೋಟಕ್ಕೆ ಐವರು ಬಲಿ

ಘಟನಾ ಸ್ಥಳಕ್ಕೆ ಸಚಿವ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಚಿಕ್ಕಬಳ್ಳಾಪುರ, ಫೆ. 23: ರಾಜ್ಯ ಹಾಗೂ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶಿವಮೊಗ್ಗ ಗಣಿ ದುರಂತದ ಆತಂಕ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಗಣಿ ಸ್ಪೋಟ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕು ಹಿರೇನಾಗವೇಲ್ಲಿ ಗ್ರಾಮದ ಬಳಿ ಸಂಭವಿಸಿದ ಜಿಲೆಟಿನ್ ಸ್ಫೋಟದ ದುರಂತದಲ್ಲಿ ಐದು ಮಂದಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾರೆ.

ಹೀರೆನಾಗವೇಲ್ಲಿ ಸಮೀಪದ ಭ್ರಮರವಾಸಿನಿ ಕ್ರಷರ್ ಸಮೀಪ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಅಪರೇಟರ್ ಆದ ಗಂಗಾಧರ್, ವೇಯರ್ ಆದ ಮುರುಳಿ ಹಾಗೂ ವಾಚ್ ಮೆನ್ ಮಹೇಶ್ ಸೇರಿದಂತೆ ಸ್ಥಳೀಯ ರಾಮು ಎಂಬಾತ ಮೃತಪಟ್ಟಿದ್ದಾರೆ. ಈ ಪೈಕಿ ಟಾಟಾ ಏಸ್ ಚಾಲಕ ರಿಯಾಜ್ ಎಂಬಾತ ಗಂಭೀರ ಗಾಯಗಳಾಗಿದೆ. ಈತನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ವ್ಯಕ್ತಿ ಬೈಕ್ ಹಾಗೂ ಟಾಟಾ ಏಸ್ ಆಟೋ ಮೂಲಕ ಕ್ರಷರ್ ನಿಂದ ಒಂದು ಕಿಲೋಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಹಾಗೂ ಎಲೆಕ್ಟ್ರಿಕ್ ಡಿಟೋನೇಟರ್ಸ್ ಹೊತ್ತುತರಲು ಮುಂದಾಗಿದ್ದಾರೆ.

ಈ ವೇಳೆ ಅರಣ್ಯ ಪ್ರದೇಶದಲ್ಲಿ ಅಡಗಿಸಿದ್ದ ಸ್ಫೋಟಕಗಳನ್ನ ಹೊತ್ತು ತರುವ ವೇಳೆ ಏಕಾಏಕಿ ಬ್ಲಾಸ್ಟ್ ಆಗಿದ್ದು, ಪರಿಣಾಮ ಐದು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಛಿಧ್ರ ಛಿದ್ರವಾಗಿ ಮೃತದೇಹಗಳೆಲ್ಲಾ ನೂರಾರು ಮೀಟರ್ ಚೆಲ್ಲಾಪಿಲ್ಲಿಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ, ಎಸ್​ಪಿ ಜಿ.ಕೆ. ಮಿಥುನ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version