ಹಿಂದಿ ಭಾಷೆಯನ್ನು ಸಮರ್ಥನೆ ಮಾಡಿಕೊಂಡಿದ್ದ ಸಾಹಿತಿ ದೊಡ್ಡರಂಗೇಗೌಡ ಅವರಿಂದ ಕ್ಷಮೆಯಾಚನೆ

ಮೈಸೂರು, ಜ. 27: ಹಿಂದಿ ರಾಷ್ಟ್ರಭಾಷೆ, ಇಂಗ್ಲಿಷ್‌ಗೆ ಗುಲಾಮರಾಗುವ ಬದಲು ಹಿಂದಿ ಕಲಿಯುವುದರಲ್ಲಿ ತಪ್ಪೇನಿದೆ ಎಂದು ಸಂದರ್ಶನದಲ್ಲಿ ಹೇಳಿದ್ದ ಸಾಹಿತಿ ದೊಡ್ಡರಂಗೇಗೌಡ ಅವರು ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ.

ಇಂದು ಪತ್ರಿಕಾ ಹೇಳಿಕೆ ಬಿಡುಗಡೆಮಾಡಿರುವ ಅವರು, ನಾನು ಯಾವ ಭಾಷೆಯನ್ನೂ ತಲೆ ಮೇಲೆ ಹೊತ್ತು ಮೆರೆಸುತ್ತಿಲ್ಲ. ಕನ್ನಡವನ್ನು ನಾನು ಆರಾಧಿಸುತ್ತೇನೆ.
ತಲೆ ಮೇಲೆ ಹೊತ್ತು ಮೆರೆಸುತ್ತೇನೆ. ಕನ್ನಡಿಗರ ಮೇಲೆ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯನ್ನು ಹೇರುವುದನ್ನು ನಾನು ಸಹಿಸುವುದಿಲ್ಲ. ನನ್ನ ಮಾತುಗಳು ಕನ್ನಡಿಗರ ಮನಸ್ಸು ನೋಯಿಸಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷ ಹಾವೇರಿಯಲ್ಲಿ ನಡೆಯುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಒಲುಮೆಯ ಕವಿ ಎಂದೇ ಚಿರಪರಿಚಿತ ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ.‌ ಈ ನಡುವೆ, ಕನ್ನಡ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿಕೆ ನೀಡಿದ್ದರು. ವಿದೇಶದ ಇಂಗ್ಲಿಷ್‌ಅನ್ನು ಒಪ್ಪುವುದಾದರೆ ದೇಶದ್ದೇ ಆದ ಭಾಷೆಗೆ ವಿರೋಧ ಏಕೆ. ಇದು ಅರ್ಥವಾಗದ ಸಂಗತಿ ಎಂದಿದ್ದರು.

ಬಳಿಕ ಬೇರೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿಯೂ ಅವರು ಹಿಂದಿ ಭಾಷೆಯ ಹೇರಿಕೆಯಾಗುತ್ತಿಲ್ಲ. ಹಿಂದಿಗೆ ಮಹತ್ವ ನೀಡುವುದರಲ್ಲಿ ತಪ್ಪಿಲ್ಲ ಎಂದಿದ್ದರು. ದೊಡ್ಡರಂಗೇ ಗೌಡರ ಈ ಹೇಳಿಕೆಗೆ ರಾಜಕೀಯ ನಾಯಕರು, ವಿವಿಧ ಕನ್ನಡ ಸಂಘಟನೆಗಳ ಸದಸ್ಯರು ‌ಹಾಗೂ ಹಲವು ಸಾರ್ವಜನಿಕರು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

Exit mobile version