ರಾಜ್ಯದ ‘ಈ ಆರು’ ರಾಜಕೀಯ ನಾಯಕರಿಗೆ ಕೇಜ್ರಿವಾಲ್ ಗಾಳ!

aravind kejrival

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Vidhansabha Elections) ಉತ್ತಮ ಸಾಧನೆ ಮಾಡಲು ಮತ್ತು ಬಿಜೆಪಿ(BJP), ಕಾಂಗ್ರೆಸ್(Congress)ಮತ್ತು ಜೆಡಿಎಸ್(JDS) ಪಕ್ಷಗಳಿಗೆ ಸರಿಸಾಟಿಯಾಗಿ ನಿಲ್ಲುವುದಕ್ಕೆ ಆಮ್ ಆದ್ಮಿ ಪಾರ್ಟಿ(AAP) ಭರ್ಜರಿ ತಯಾರಿ ನಡೆಸಿದೆ.

ಈಗಾಗಲೇ ದೆಹಲಿ(Delhi) ಮತ್ತು ಪಂಜಾಬ್‍ನಲ್ಲಿ(Punjab) ಅಧಿಕಾರಕ್ಕೇರಿರುವ ಆಮ್ ಆದ್ಮಿ ಪಾರ್ಟಿಗೆ ರಾಜಕೀಯ ಅನುಭವವೂ ಲಭಿಸಿದೆ. ಚುನಾವಣೆಯನ್ನು ಎದುರಿಸುವ ತಂತ್ರಗಾರಿಕೆಯೂ ಸಿದ್ದಿಸಿದೆ. ಹೀಗಾಗಿ 2023ರಲ್ಲಿ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಕೇಂದ್ರೀಕರಿಸಿಕೊಂಡು ನೀಲನಕ್ಷೆಯನ್ನು ಕೇಜ್ರಿವಾಲ್ ರೂಪಿಸಿದ್ದಾರೆ. ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನು ಬಲಪಡಿಸಬೇಕಾದರೆ ಜನಪರ ರಾಜಕೀಯ ನಾಯಕರು ಪಕ್ಷವನ್ನು ಸೇರ್ಪಡೆಯಾಗಬೇಕು ಎಂಬುದನ್ನು ಅರಿತಿರುವ ಕೇಜ್ರಿವಾಲ್ ಈ ನಿಟ್ಟಿನಲ್ಲಿ ರಾಜ್ಯದ ಕೆಲ ಪ್ರಭಾವಿ ಜನಪರ ನಾಯಕರನ್ನು ಆಮ್ ಆದ್ಮಿ ಪಕ್ಷಕ್ಕೆ ಸೆಳೆಯಲು ಗಾಳ ಬೀಸಿದ್ದಾರೆ.

ಕೇಜ್ರಿವಾಲ್ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನು ಕಟ್ಟಲು ಮೂರು ಪಕ್ಷಗಳಲ್ಲಿರುವ ಜನಪರ ನಾಯಕರನ್ನೇ ಸೆಳೆಯಲು ನಿರ್ಧರಿಸಿದ್ದು, ಈಗಾಗಲೇ ಕೆಲವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಆದರೆ ಪ್ರಮುಖ ‘ಈ ಆರು’ ನಾಯಕರನ್ನು ಸೆಳೆಯಲು ಕೇಜ್ರಿವಾಲ್ ಭಾರೀ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಈ ಆರು ಪ್ರಮುಖ ಜನಪರ ನಾಯಕರೆಂದರೆ, ಜೆಡಿಎಸ್ ಶಾಸಕ ಶಿವಲಿಂಗೇಗೌಡ, ವೈ.ಎಸ್‍ವಿ ದತ್ತ ಮತ್ತು ಎ.ಟಿ ರಾಮಸ್ವಾಮಿ, ಬಿಜೆಪಿಯ ಮಾಧುಸ್ವಾಮಿ ಮತ್ತು ಪಿ. ರಾಜೀವ್, ಕಾಂಗ್ರೆಸ್‍ನ ಎಸ್.ಆರ್ ಪಾಟೀಲ್ ಮತ್ತು ಬಿ.ಆರ್ ಪಾಟೀಲ್.

ಈ ಎಲ್ಲ ನಾಯಕರೊಂದಿಗೆ ಕೇಜ್ರಿವಾಲ್ ದೂರವಾಣಿ ಮೂಲಕ ಮಾತನಾಡಿದ್ದಾರೆ. ಆದರೆ ಬಹುತೇಕ ನಾಯಕರು ಮುಂದಿನ ದಿನಗಳಲ್ಲಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಅರವಿಂದ ಕೇಜ್ರಿವಾಲ್ ರಾಜಕೀಯ ನಾಯಕರೊಂದಿಗೆ ಪ್ರಭಾವಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ. ರಾಜ್ಯದ ಕೆಲ ಪೊಲೀಸ್ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡಿ, ವಿಆರ್‍ಎಸ್ ತೆಗೆದುಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿ ಎಂದು ಮನವಿ ಮಾಡಿದ್ಧಾರೆ ಎನ್ನಲಾಗಿದೆ.

ಇನ್ನು ಆಮ್ ಆದ್ಮಿ ಪಕ್ಷದೊಂದಿಗೆ ಕೋಡಿಹಳ್ಳಿ ಚಂದ್ರಶೇಖರ್ ಅವರ ರಾಜ್ಯ ರೈತ ಸಂಘವೂ ಕೈ ಜೋಡಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಏನೆಲ್ಲಾ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version