ದಲಿತರ ಮೇಲಿನ ದೌರ್ಜನ್ಯ ಗಮನಿಸಿದರೆ ಯಾವ ಮಂದಿರವೂ ಬೇಡ, ಮಸೀದಿಯೂ ಬೇಡ ಎನಿಸುತ್ತದೆ: ಎಚ್.ಸಿ.ಮಹದೇವಪ್ಪ

ಮೈಸೂರು, ಫೆ 19: ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳನ್ನು ನೆನೆದರೆ ಯಾವ ಮಂದಿರವೂ ಬೇಡ, ಮಸೀದಿಯೂ ಬೇಡ, ಜನರು ಅದರಲ್ಲೂ ದಲಿತರ ಜೀವ ಉಳಿದರೆ ಸಾಕು ಎನಿಸಿಬಿಟ್ಟಿದೆ ಎಂದು ಮಾಜಿ ಸಚಿವ ಡಾ.ಎಚ್. ಮಹದೇವಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಹುಡುಗಿಯರ ಸಾವಿನ ಪ್ರಕರಣ ಕುರಿತು ಟ್ವೀಟ್ ಮಾಡಿರುವ ಅವರು, ದೇವರು, ಧರ್ಮ ಅಂತ ಈ ಮನುವಾದಿಗಳು ಗಂಟಲು ಹರಿದುಕೊಂಡರೂ ಕೂಡಾ ಇವರಲ್ಲಿ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಒಂದೇ ಒಂದು ಮಾತನ್ನು ಸಹ ಆಡುವಷ್ಟು ನೈತಿಕತೆ ಉಳಿದಿಲ್ಲ, ನನ್ನ ಪ್ರಕಾರ ಇದೇ ಅವರ ನಿಜವಾದ ಯೋಗ್ಯತೆ ಎಂದು ಟೀಕಿಸಿದ್ದಾರೆ.

ರಾಮ ಮಂದಿರ ಕಟ್ಟುವ ನೆಲದಲ್ಲಿ ದಲಿತರ ಸಾವು ನೋವುಗಳನ್ನು ನೋಡುವಾಗ ರಾಮನ ನಕಲಿ ಭಕ್ತರು ಸುಮ್ಮನಿರಬಹುದೇ ವಿನಃ ಬದುಕಲ್ಲಿ ಬಾಲ್ಯದಿಂದಲೂ ಹತ್ತು ಹಲವು ನೋವುಗಳನ್ನು ಅನುಭವಿಸಿದ ಸೀತಾಮಾತೆ ಖಂಡಿತಾ ಸುಮ್ಮನಿರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಅಲ್ಲದೇ, ಇನ್ನು ಈ ದಿನ ದಲಿತರ ಮೇಲಿನ ದೌರ್ಜನ್ಯಗಳನ್ನು ನೆನೆದರೆ ಯಾವ ಮಂದಿರವೂ ಬೇಡ, ಮಸೀದಿಯೂ ಬೇಡ, ಜನರು ಅದರಲ್ಲೂ ದಲಿತರ ಜೀವ ಉಳಿದರೆ ಸಾಕು ಎನಿಸಿಬಿಟ್ಟಿದೆ. ನಾನು ಈಗಲೂ ವಿಶ್ವಾಸದಿಂದ ಹೇಳುತ್ತೇನೆ ಉತ್ತರ ಪ್ರದೇಶದ ಉನ್ನಾವ್ ನಲ್ಲಿ ಸಾವನ್ನಪ್ಪಿದವರಿಗೆ ಒಂದು ವೇಳೆ ನ್ಯಾಯವೇನಾದರೂ ಸಿಕ್ಕರೆ ಅದು ಬಾಬಾ ಸಾಹೇಬರ ಸಂವಿಧಾನದಿಂದಲೇ ವಿನಃ ಯಾವ ಮಂದಿರದಿಂದಲೂ ಅಲ್ಲ, ಮಸೀದಿಯಿಂದಲೂ ಅಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Exit mobile version