ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ

ಚಿಕ್ಕಮಗಳೂರು, ಫೆ. 27: ಇಬ್ಬರು ದರೋಡೆಕೋರರು ಸೇರಿ  ಹಾಡಹಗಲೇ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ಚಿಕ್ಕಮಂಗಳೂರು  ನಗರ ಎಐಟಿ ಸರ್ಕಲ್ ನಲ್ಲಿ ನಡೆದಿದೆ. ಎಐಟಿ ಸರ್ಕಲ್ ನಲ್ಲಿರುವ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಎಂಬವರ ಮನೆ ಬಳಿ ಪಲ್ಸರ್ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಯುವಕರು ತಲೆಗೆ ಹೆಲ್ಮೆಟ್ ಧರಿಸಿ ಕೈಯಲ್ಲಿ ಚಾಕು ಹಿಡಿದು ಮನೆಯೊಳಗೆ ಪ್ರವೇಶಿಸಿದ್ದಾರೆ.

ಮನೆಯಲ್ಲಿ ಚಂದ್ರೇಗೌಡ ಅವರ  ಪತ್ನಿ ಒಬ್ಬರೇ ಇದ್ದರು. ಅವರ ಕೈ  ಮತ್ತು ಬಾಯಿಗೆ ವೇಲ್ ನಿಂದ ಕಟ್ಟಿ ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯ ಮಗ ಬಂದು ನೋಡಿ ಕರೆದಿದ್ದಾನೆ. ಒಳಗಿನಿಂದ ಅಮ್ಮನ ಧ್ವನಿ ಕೇಳದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ. ಆಗ ತನ್ನ ತಾಯಿಯನ್ನು ಕಟ್ಟಿಹಾಕಿರುವುದನ್ನು ಕಂಡು ಕಿರುಚಾಡಿದ್ದಾನೆ. ಆಗ ಒಳಗಿದ್ದ ದರೋಡೆಕೋರರಿಬ್ಬರು ಹೊರಗೆ ಓಡಿ ಬಂದಿದ್ದಾರೆ.

ಈ ವೇಳೆ ಸಾರ್ವಜನಿಕರು ಇಬ್ಬರು ದರೋಡೆಕೋರರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಚಾಕು ತೋರಿಸಿದ ಖದೀಮರು ಸಾರ್ವಜನಿಕರು ನೋಡುತ್ತಿದ್ದಂತೆಯೇ ಓಡಿಹೋಗಿದ್ದಾರೆ. ದರೋಡೆಕೋರರು ಬೈಕ್ ಹತ್ತಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳ ಸಾರ್ವಜನಿಕರು ಕೂಗಾಡಿದ್ದರಿಂದ ಅಲ್ಲೇ ರಸ್ತೆಯಲ್ಲಿ ಬರುತ್ತಿದ್ದ ಅಗ್ನಿಶಾಮಕ ವಾಹನದ ಚಾಲಕ ವಾಹನವನ್ನು ಢಿಕ್ಕಿ ಹೊಡೆಸಿ ಅವರನ್ನು ಕೆಳಗೆ ಬೀಳಿಸಿದ್ದಾನೆ.

ಸಾರ್ವಜನಿಕರು ಇಬ್ಬರ ಮೇಲೂ ಕಲ್ಲು ತೂರಾಟ ನಡೆಸಿದ್ದರಿಂದ ದರೋಡೆಕೋರರಿಬ್ಬರು ಸರ್ಕಲ್ ಬಳಿಯ ಕಲ್ಯಾಣ ನಗರದತ್ತ ಓಡಿದ್ದಾರೆ. ಆರೋಪಿಗಳು ಪಾರಾರಿಯಾಗುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆ ಪ್ರಕರಣ ಸಂಬಂಧ ದಂಟರಮಕ್ಕಿ ಬಡಾವಣೆಯ ಸಚಿನ್ ಮತ್ತು ಮೋಹನ್ ಎಂಬ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

Exit mobile version