ದಾನಕ್ಕೆ(Donate) ನಮ್ಮ ದೇಶದಲ್ಲಿ ಬಹಳ ಮಹತ್ವವಿದೆ. ಹಾಗಾಗಿ, ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಸಮಾಜ ಸೇವೆಗೆ ಹಣ ನೀಡುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ. ಎಡೆನ್‌ಗೀವ್ ಹರೂನ್ ಇಂಡಿಯಾ ಸಂಸ್ಥೆ 2017-18 ರಲ್ಲಿ ಅತಿಹೆಚ್ಚು ದಾನ ಮಾಡಿದ ಭಾರತದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿತ್ತು. ಅಕ್ಟೋಬರ್ 1, 2017 ರಿಂದ ಸೆಪ್ಟೆಂಬರ್ 31, 2018 ರವರೆಗೆ ಶ್ರೀಮಂತ ಉದ್ಯಮಿಗಳು ನೀಡಿದ ದಾನದ ಆಧಾರದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.

ಇದರ ಹಿನ್ನೆಲೆ ಹೀಗಿದೆ, ಜಗತ್ತಿನ ನಂ.1 ಹಾಗೂ ನಂ.2 ಶ್ರೀಮಂತರಾಗಿದ್ದ ಅಮೆರಿಕದ ಬಿಲ್‌ಗೇಟ್ಸ್(Billgates) ಹಾಗೂ ವಾರನ್ ಬಫೆಟ್(Waren Buffet) ಕೆಲ ವರ್ಷಗಳ ಹಿಂದೆ ಆರಂಭಿಸಿದ್ದ ‘ದಾನ’ ಸಂಪ್ರದಾಯ ಈಗ ಭಾರತಕ್ಕೂ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ. ಬಿಲ್‌ಗೇಟ್ಸ್ ಮತ್ತು ವಾರನ್ ಬಫೆಟ್ ತಮ್ಮ ಆಸ್ತಿಯ ಬಹುಪಾಲನ್ನು ಸಮಾಜ ಸೇವೆಗೆ ದಾನ ಮಾಡಿ, ಜಗತ್ತಿನ ಇತರ ಶ್ರೀಮಂತರೂ ಹೀಗೇ ಮಾಡಬೇಕೆಂದು ಆಂದೋಲನ ಆರಂಭಿಸಿದ್ದರು. ಅದಕ್ಕೆ ಭಾರತದ ಶ್ರೀಮಂತ ಉದ್ಯಮಿಗಳೂ ಕೂಡ ಉದಾರ ಮನಸ್ಸಿನಿಂದಲೇ ಕೈಜೋಡಿಸಿದ್ದು, ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಸಮಾಜ ಸೇವೆಗೆ ಹಣ ನೀಡುವ ಗಣ್ಯರ ಸಂಖ್ಯೆಯೂ ಹೆಚ್ಚುತ್ತಿದೆ.
ಇದರಲ್ಲಿ ಮುಂಚೂಣಿಯಲ್ಲಿರುವವರು “ಅಜೀಂ ಪ್ರೇಮ್‌ಜಿ”(Ajim Prem Ji), ಇವರ ಒಟ್ಟು ಆಸ್ತಿ 51,153 ಕೋಟಿ, ದಾನ ಮಾಡಿರುವ ಮೊತ್ತ 453 ಕೋಟಿ. 74 ವರ್ಷದ ಅಜೀಂ ಪ್ರೇಮ್‌ಜಿ ವಿಪ್ರೋ(Wipro) ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸಂಸ್ಥಾಪಕ. ಟೈಮ್ ಮ್ಯಾಗಜಿನ್ ಪ್ರಕಟಿಸಿದ್ದ ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳ ಪೈಕಿ ಇವರು ಹೆಸರೂ ಇತ್ತು. ಜಗತ್ತಿನ ನಂ.1 ಶ್ರೀಮಂತರಾಗಿದ್ದ ಮೈಕ್ರೋಸಾಫ್ಟ್(Microsoft) ಸಂಸ್ಥಾಪಕ ಬಿಲ್‌ಗೇಟ್ಸ್ ಮತ್ತು ಜಗತ್ತಿನ 2ನೇ ಶ್ರೀಮಂತರಾಗಿದ್ದ ವಾರನ್ ಬಫೆಟ್ ಕೆಲ ವರ್ಷಗಳ ಹಿಂದೆ ‘ದಿ ಗಿವಿಂಗ್ ಪ್ಲೆಡ್ಜ್’(The Giving Pledge) ಎಂಬ ಯೋಜನೆ ಆರಂಭಿಸಿದ್ದರು.

ದೊಡ್ಡ ಉದ್ಯಮಿಗಳು ತಮ್ಮ ಆಸ್ತಿಯ ಬಹುಪಾಲನ್ನು ಸಮಾಜ ಸೇವೆಗೆ ದಾನ ನೀಡುವ ಯೋಜನೆಯಿದು. ಈ ಯೋಜನೆಗೆ 2013 ರಲ್ಲಿ ಅಜೀಂ ಪ್ರೇಮ್‌ಜಿ ಸಹಿ ಮಾಡಿದ್ದಾರೆ. 2001 ರಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಸ್ಥಾಪಿಸಿ ಇದುವರೆಗೆ 21,000 ಕೋಟಿ ರೂ. ದಾನ ನೀಡಿದ್ದಾರೆ. ಅದೇ ರೀತಿ 2020 ರಲ್ಲಿ 7904 ಕೋಟಿ ಹಣವನ್ನು ದಾನ ಮಾಡುವ ಮೂಲಕ, 2020 ರ ವರ್ಷದಲ್ಲಿ ಅತೀ ಹೆಚ್ಚು ಹಣವನ್ನು ದಾನ ಮಾಡಿದ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
- ಪವಿತ್ರ ಸಚಿನ್