ವರಸೆ ಬದಲಿಸಿದ ಬಾಬಾ ರಾಮದೇವ್: ವೈದ್ಯರು ದೇವದೂತರು, ಶೀಘ್ರವೇ ಲಸಿಕೆ ಪಡೆಯುವೆ ಎಂದ ಯೋಗಗುರು

ಉತ್ತರಾಖಂಡ, ಜೂ. 11: ಕೋವಿಡ್‌ ಲಸಿಕೆ ಹಾಗೂ ಅಲೋಪತಿ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಯೋಗ ಗುರು ಬಾಬಾ ರಾಮದೇವ್‌ ಇದೀಗ ವರಸೆ ಬದಲಿಸಿದ್ದು, ವೈದ್ಯರನ್ನು ದೇವದೂತರು ಎಂದು ಬಣ್ಣಿಸಿರುವ ಅವರು ಶೀಘ್ರವೇ ಲಸಿಕೆ ಪಡೆಯುವುದಾಗಿ ತಿಳಿಸಿದ್ದಾರೆ.

ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್ ಲಸಿಕೆ ಅಗತ್ಯ ನನಗಿಲ್ಲ ಎಂದು ರಾಮದೇವ್‌ ಅವರು ಕೋವಿಡ್-19 ಮೇಲೆ ಅಲೋಪಥಿ ಔಷಧಿಗಳ ಪರಿಣಾಮಕಾರಿತ್ವದ ಬಗ್ಗೆ ಇತ್ತೀಚೆಗೆ ಸಂಶಯ ವ್ಯಕ್ತಪಡಿಸಿದ್ದರು. ಇದು ವೈದ್ಯರಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಯಿತು. ರಾಮದೇವ್ ವಿರುದ್ಧ ಎಲ್ಲೆಡೆ ವೈದ್ಯರು ಪ್ರತಿಭಟನೆ ನಡೆಸಿದರು.

ಜೂನ್ 21 ರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ಸ್ವಾಗತಿಸಿರುವ ಬಾಬಾ ರಾಮದೇವ್, ಇದೊಂದು ‘ಐತಿಹಾಸಿಕ ನಡೆ‘ ಎಂದು ಬಣ್ಣಿಸಿದ್ದಾರೆ. ದೇಶದಲ್ಲಿ ಎಲ್ಲರೂ ಲಸಿಕೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ.

‘ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನೂ ಪಡೆಯಿರಿ. ಯೋಗ ಮತ್ತು ಆಯುರ್ವೇದದ ರಕ್ಷಣೆಗಳನ್ನೂ ಪಡೆದುಕೊಳ್ಳಿ. ಈ ಎರಡರಿಂದಲೂ ಬಲವಾದ ರಕ್ಷಣೆ ಸಿಗುತ್ತದೆ. ಆಗ ಕೋವಿಡ್‌ಗೆ ಯಾವೊಬ್ಬ ವ್ಯಕ್ತಿಯೂ ಪ್ರಾಣಬಿಡುವುದಿಲ್ಲ,‘ ಎಂದು ಹರಿದ್ವಾರದಲ್ಲಿ ಸುದ್ದಿಗಾರರಿಗೆ ಬಾಬಾ ತಿಳಿಸಿದ್ದಾರೆ. ಈ ವೇಳೆ ಅಲೋಪತಿಯನ್ನೂ ಹೊಗಳಿದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ)ದೊಂದಿಗಿನ ಜಟಾಪಟಿ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನಾನು ಯಾವುದೇ ಸಂಘಟನೆಯೊಂದಿಗೆ ದ್ವೇಷ ಹೊಂದಿಲ್ಲ. ಔಷಧಿಗಳ ಹೆಸರಿನಲ್ಲಿ ಜನರ ಮೇಲೆ ನಡೆಯುವ ಶೋಷಣೆಗೆ ನನ್ನ ವಿರೋಧʼ ಎಂದರು.

Exit mobile version