ನಾನೇ ರಾಜ್ಯದ ಮುಂದಿನ ಮುಖ್ಯಮಂತ್ರಿ : ಬಸವನಗೌಡ ಯತ್ನಾಳ್!

basavanagowda patil


ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ನಾನೇ ಅಧಿಕಾರ ವಹಿಸಿಕೊಳ್ಳುತ್ತೇನೆ. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳು ನನ್ನಲ್ಲಿವೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆಯ ನಂತರ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ವಿಜಯಪುರ ನಗರದ ಬಿಜೆಪಿ ಶಾಸಕ(BJP MLA) ಬಸವನಗೌಡ ಪಾಟೀಲ್ ಯತ್ನಾಳ್(Basavanagowda Patil yathnal) ಹೇಳಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಳೆದ ಅನೇಕ ವರ್ಷಗಳಿಂದ ಬಿಜೆಪಿಯಲ್ಲೇ ಇದ್ದೇನೆ. ನನ್ನ ಮೇಲೆ ಗಣಿ ಹಗರಣವಿಲ್ಲ. ಯಾವುದೇ ಭೂ ಹಗರಣವಿಲ್ಲ. ನನ್ನ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆಪಾದನೆ ಇಲ್ಲ. ಹೀಗಾಗಿ ನನ್ನ ಪ್ರಾಮಾಣಿಕತೆಯನ್ನು ಪರಿಗಣಿಸಿದರೆ ನಾನೇ ಮುಂದಿನ ಮುಖ್ಯಮಂತ್ರಿಯಾಗುತ್ತೇನೆ. ಮುಖ್ಯಮಂತ್ರಿಯಾಗುವುದಕ್ಕೆ ಬೇಕಾದ ಎಲ್ಲಾ ಸಂಘಟನಾ ಶಕ್ತಿಯೂ ನನ್ನಲಿದೆ. ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಉಸ್ತುವಾರಿ ನೀಡಿದರೆ 130 ಸ್ಥಾನಗಳನ್ನು ಗೆಲ್ಲಿಸಿಕೊಡುವ ಶಕ್ತಿ ನನಗಿದೆ.

ಅವಕಾಶ ಸಿಕ್ಕರೆ ನನ್ನ ಸಾಮಥ್ರ್ಯವನ್ನು ತೋರಿಸುತ್ತೇನೆ ಎಂದರು. ಇನ್ನು ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ನಾಯಕತ್ವ ಬದಲಾವಣೆ ಕುರಿತು ಮಾತನಾಡುತ್ತಿದ್ದರು. ಹೀಗಾಗಿಯೇ ಬಿ.ಎಸ್ ಯಡಿಯೂರಪ್ಪ ವಿರೋಧಿ ಪಾಳಯದಲ್ಲಿ ಯತ್ನಾಳ್ ಗುರುತಿಸಿಕೊಂಡಿದ್ದರು. ಸಚಿವ ಸ್ಥಾನ ನೀಡುವಲ್ಲಿ ನನ್ನನ್ನು ಕಡೆಗಣಿಸಲಾಗಿದೆ ಎಂದು ಯಡಿಯೂರಪ್ಪ ವಿರುದ್ದ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು.

ಇನ್ನು ಬಿಎಸ್‍ವೈ ಪುತ್ರ ವಿಜಯೇಂದ್ರ ವಿರುದ್ದ ಭ್ರಷ್ಟಾಚಾರ ಆರೋಪ ಸೇರಿದಂತೆ ನಿರಂತರ ವಾಗ್ದಾಳಿ ನಡೆಸಿದ್ದರು. ಹೀಗಾಗಿ ತಮ್ಮ ನೇರ ಮತ್ತು ನಿಷ್ಠುರ ನುಡಿಗಳ ಪರಿಣಾಮ ಯತ್ನಾಳ್ ಬಿಜೆಪಿಯಲ್ಲಿ ಮೂಲೆ ಗುಂಪಾಗಿದ್ದಾರೆ. ಆದರೆ ಇದೀಗ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಈ ರೀತಿಯ ಹೇಳಿಕೆ ನೀಡಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ್ ನೀಡಿರುವ ಈ ಹೇಳಿಕೆಯನ್ನು ಬಿಜೆಪಿ ಹೈಕಮಾಂಡ್ ಯಾವ ರೀತಿ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version