ಮತಾಂತರ ಆರೋಪ : ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆ : ಬಿ.ಸಿ ನಾಗೇಶ್!

education minister

ರಾಜ್ಯದ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ನಡೆಯುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಬೆಂಗಳೂರಿನ(Bengaluru) ಕ್ಲಾರೆನ್ಸ್ ಪ್ರೌಢಶಾಲೆಯ(Clarence Highschool) ಘಟನೆಯ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆ ನಡೆಸಲು ಮುಂದಾಗಿದೆ.

ಈ ಕುರಿತು ಮಾತನಾಡಿರುವ ರಾಜ್ಯ ಶಿಕ್ಷಣ ಸಚಿವ(Education Minister) ಬಿ.ಸಿ ನಾಗೇಶ್(BC Nagesh), ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸಲಾಗುತ್ತಿರುವ ಪಠ್ಯವನ್ನು ಪರಿಶೀಲನೆ ನಡೆಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೇನೆ. ಕ್ರೈಸ್ತ ಮಿಷನರಿಗಳು ನಡೆಸುವ ಶಾಲೆಗಳ ಮೇಲೆ ನಿಗಾ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸರ್ಕಾರದ ನೀತಿ-ನಿಯಮಗಳಿಗೆ ವಿರುದ್ದವಾಗಿ ಧಾರ್ಮಿಕ ಪಠ್ಯ ಬೋಧಿಸುತ್ತಿದ್ದರೆ ಅಂತ ಶಾಲೆಗಳ ವಿರುದ್ದ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ವೇಳೆಯಲ್ಲಿ ಬೈಬಲ್ ಓದಲು ಒಪ್ಪಿಗೆ ಇದೆಯೇ? ಎಂದು ಅರ್ಜಿಯಲ್ಲಿ ಕೇಳಲಾಗುತ್ತದೆ. ಒಪ್ಪಿಗೆ ಸೂಚಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಈ ರೀತಿ ಮಾಡುವುದು ಸಂವಿಧಾನ ವಿರೋಧಿಯಾಗಿದೆ. ಬೈಬಲ್ ಓದಲು ನಿರಾಕರಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವುದು ರಾಜ್ಯ ಶಿಕ್ಷಣ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವುದು ಮತ್ತು ಒಂದು ಧರ್ಮದ ಪ್ರಚಾರ ಮಾಡುವುದನ್ನು ಶಿಕ್ಷಣ ಕಾಯ್ದೆಯಲ್ಲಿ ನಿಬರ್ಂಧಿಸಲಾಗಿದೆ.

ಮತಾಂತರ ಮಾಡುವ ಉದ್ದೇಶದಿಂದ ಶಿಕ್ಷಣದ ಆಮಿಷ ಒಡ್ಡುವುದನ್ನು ಕೂಡಾ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ಹಿಜಾಬ್ ಮತ್ತು ಟಿಪ್ಪು ವಿಚಾರವಾಗಿ ಮಾತನಾಡುವ ವಿಪಕ್ಷಗಳು ಬೈಬಲ್ ವಿಚಾರದಲ್ಲಿ ಮೌನವಹಿಸಿವೆ. ಕ್ರೈಸ್ತ ಶಾಲೆಗಳಿಗೆ ಎಲ್ಲ ಧರ್ಮದ ಮಕ್ಕಳು ಕಲಿಕೆಗಾಗಿ ಬರುತ್ತಾರೆ. ಶಿಕ್ಷಣ ನೀತಿಗಳಿಗೆ ಅನುಗುಣವಾಗಿ ಪಾಠ ಮಾಡಬೇಕು. ಧಾರ್ಮಿಕ ಬೋಧನೆ ಮಾಡಲು ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.

Exit mobile version