ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಉಡುಪಿ, ಜೂ. 8: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಅವರ ಹೆಂಡತಿ, ಮಗ ಹಾಗೂ ಹೆಂಡತಿಯ ಗೆಳೆಯ ಸೇರಿ ಕೊಲೆ ಮಾಡಿ, ಹೋಮದ ಕುಂಡದಲ್ಲೇ ಸುಟ್ಟುಹಾಕಿದ್ದರು. ಉಡುಪಿಯ ಇಂದ್ರಾಳಿಯಲ್ಲಿ 2016ರ ಜುಲೈ 28ರಂದು ನಡೆದಿದ್ದ ಈ ಹತ್ಯೆ ಪ್ರಕರಣಕ್ಕೆ ಇಡೀ ದೇಶದ ಗಮನ ಸೆಳೆದಿತ್ತು. ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳು ದೋಷಿಗಳೆಂದು ಉಡುಪಿ ಜಿಲ್ಲಾ ನ್ಯಾಯಾಲಯ ಇಂದು ತೀರ್ಪು ಪ್ರಕಟ ಮಾಡಿದೆ. ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್ ಇಂದು ತೀರ್ಪು ನೀಡಿದ್ದು, ಭಾಸ್ಕರ್ ಶೆಟ್ಟಿಯವರನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟಿರುವ ಆರೋಪ ಸಾಬೀತಾಗಿರುವುದರಿಂದ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ರಾಜೇಶ್ವರಿಯ ಗೆಳೆಯ ನಿರಂಜನ ಭಟ್ ಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ. ಐದನೇ ಆರೋಪಿ ಚಾಲಕ ರಾಘವೇಂದ್ರನನ್ನು ಖುಲಾಸೆಗೊಳಿಸಲಾಗಿದೆ. ನಾಲ್ಕನೇ ಆರೋಪಿ ಶ್ರೀನಿವಾಸ್ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಮೂವರು ಪ್ರಮುಖ ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ಪ್ರಕಟವಾಗಿದ್ದು, ಉಡುಪಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ಮಹತ್ವದ ತೀರ್ಪು ಹೊರಬಿದ್ದಿದೆ. ದುಬೈನಲ್ಲಿ ಉದ್ಯಮಿಯಾಗಿದ್ದ ಭಾಸ್ಕರ್‌ ಶೆಟ್ಟಿ ಅವರನ್ನು 2016ರಲ್ಲಿ ಸ್ವಾರ್ಥಕ್ಕಾಗಿ, ಹಣಕ್ಕಾಗಿ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಗೆಳೆಯ ಹಾಗೂ ಅರ್ಚಕ ನಿರಂಜನ್ ಭಟ್ ಕೊಂದು, ಹೋಮಕುಂಡದಲ್ಲಿ ಸುಟ್ಟು ಹಾಕಿದ್ದರು. ಈ ಮೂವರ ವಿರುದ್ಧವೂ ಆರೋಪ ಸಾಬೀತಾಗಿದೆ. ಸದ್ಯಕ್ಕೆ ಈ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಹೊರಗಿದ್ದಾರೆ. ಮಗ ನವನೀತ್ ಶೆಟ್ಟಿ ಹಾಗೂ ರಾಜೇಶ್ವರಿಯ ಗೆಳೆಯ ನಿರಂಜನ್ ಭಟ್​ ಬೆಂಗಳೂರಿನ ಜೈಲಿನಲ್ಲಿದ್ದಾರೆ. ಇದೀಗ ಮೂವರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2016ರ ಜುಲೈ 28ರಂದು ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ್​ ಶೆಟ್ಟಿ ಅವರನ್ನು ಉಡುಪಿಯ ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಅವರ ಹೆಂಡತಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್ ಶೆಟ್ಟಿ ಸೇರಿ ಕೊಲೆ ಮಾಡಿದ್ದರು. ಬಳಿಕ ರಾಜೇಶ್ವರಿ ತನ್ನ ಗೆಳೆಯನಾಗಿದ್ದ ಅರ್ಚಕ ನಿರಂಜನ್ ಭಟ್ ಸಹಾಯದಿಂದ ಆ ಶವವನ್ನು ಮಣ್ಣು ಮಾಡಲು ನಿರ್ಧರಿಸಿದ್ದಳು. ಇದಕ್ಕೆ ಪ್ಲಾನ್ ರೂಪಿಸಿದ್ದ ಆ ಮೂವರು ಮನೆಯಲ್ಲಿ ಹೋಮ ಮಾಡಿ, ಮಟ ಮಟ ಮಧ್ಯಾಹ್ನದ ವೇಳೆಯಲ್ಲೇ ಭಾಸ್ಕರ್ ಶೆಟ್ಟಿ ಶವವನ್ನು ಹೋಮಕುಂಡಕ್ಕೆ ಹಾಕಿ ಸುಟ್ಟುಹಾಕಿದ್ದರು.

ಅಕ್ಕಪಕ್ಕದ ಮನೆಯವರಿಗೆ ವಿಚಿತ್ರವಾದ ವಾಸನೆ ಬಂದಿದ್ದರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಜುಲೈ 31ರಂದು ಭಾಸ್ಕರ್ ಶೆಟ್ಟಿ ಅವರ ತಾಯಿ ತಮ್ಮ ಮಗ ನಾಪತ್ತೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು. ಖ್ಯಾತ ಉದ್ಯಮಿಯಾಗಿದ್ದ ಭಾಸ್ಕರ್ ಶೆಟ್ಟಿಯನ್ನು ಹುಡುಕಲು ಶುರು ಮಾಡಿದ್ದ ಪೊಲೀಸರಿಗೆ ರಾಜೇಶ್ವರಿ ಮೇಲೆ ಅನುಮಾನ ಉಂಟಾಗಿತ್ತು. ಅದಕ್ಕೆ ಪೂರಕವಾಗಿ ಭಾಸ್ಕರ್ ಶೆಟ್ಟಿಯ ತಾಯಿ ಕೂಡ ತಮ್ಮ ಸೊಸೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರಿಗೆ ರಾಜೇಶ್ವರಿ, ನವನೀತ್ ಹಾಗೂ ನಿರಂಜನ್ ಸೇರಿ ಹೋಮಕುಂಡದಲ್ಲಿ ಭಾಸ್ಕರ್ ಶೆಟ್ಟಿ ಶವವನ್ನು ಸುಟ್ಟು, ಅವರ ಮೂಳೆಗಳನ್ನು ಹೊಳೆಯಲ್ಲಿ ತೇಲಿಬಿಟ್ಟಿದ್ದು ಗೊತ್ತಾಗಿತ್ತು. ಆ ಪ್ರಕರಣದಲ್ಲಿ ಇಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

Exit mobile version