ಮಹಾರಾಷ್ಟ್ರದಲ್ಲಿ ಮೈತ್ರಿ ಮಾತುಕತೆ ಯಶಸ್ವಿ – 31 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ

Mumbai: ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ (Maharashtra) ಎನ್ಡಿಎ ಮೈತ್ರಿಕೂಟ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಕೊಂಡಿದೆ. ಬಿಜೆಪಿಯು ತನ್ನ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಎನ್ಸಿಪಿಯೊಂದಿಗೆ ಮಾತುಕತೆಯ ಮೂಲಕ ಸೀಟು ಹಂಚಿಕೆಯ ಸೂತ್ರವನ್ನು ಸಿದ್ದಪಡಿಸಿಕೊಂಡಿದೆ.

ಮೂಲಗಳ ಪ್ರಕಾರ, 31 ಕ್ಷೇತ್ರಗಳಲ್ಲಿ ಬಿಜೆಪಿ (BJP), 13 ಕ್ಷೇತ್ರಗಳಲ್ಲಿ ಶಿವಸೇನೆ ಮತ್ತು 4 ಕ್ಷೇತ್ರಗಳಲ್ಲಿ ಅಜಿತ್ ಪವಾರ್ ಅವರ ಎನ್ಸಿಪಿ ಸ್ಪರ್ಧೆ ಮಾಡಲಿದೆ. ಇನ್ನು ಮುಂಬೈನಲ್ಲಿ ಅಮಿತ್ ಷಾ (Amit Shah) ಅವರೊಂದಿಗಿನ ಸಭೆಯಲ್ಲಿ, ಶಿಂಧೆ ಅವರು 2019 ರಲ್ಲಿ ಹಿಂದಿನ ಶಿವಸೇನೆ ಗೆದ್ದಿದ್ದ 18 ಸ್ಥಾನಗಳನ್ನು ಕೇಳಿದರು. ನಂತರ ದೆಹಲಿಯಲ್ಲಿ ನಡೆದ ಸಭೆಯಲ್ಲಿ 13 ಸ್ಥಾನಗಳಿಗೆ ಒಪ್ಪಿಕೊಂಡರು ಎನ್ನಲಾಗಿದೆ. ಕಡಿಮೆ ಸ್ಥಾನಗಳಿಗೆ ಒಪ್ಪಿಗೆ ನೀಡುವಂತೆ ಶಿಂಧೆ ಮನವೊಲಿಸಲು ಬಿಜೆಪಿ ಕೇಂದ್ರ ನಾಯಕತ್ವ ಪ್ರಯತ್ನಿಸಿತ್ತು.

ಶಿವಸೇನೆ ಸಂಸದರಿಗೆ ಹೆಚ್ಚಿನ ಟಿಕೆಟ್ ಬೇಕಿದ್ದರೆ ಬಿಜೆಪಿ ಚಿಹ್ನೆಯಲ್ಲೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿತ್ತು. ಇನ್ನು ಶಿವಸೇನೆಯು ವಾಯುವ್ಯ ಮುಂಬೈ (Mumbai) ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲಿದೆ. ಪ್ರತಿಯಾಗಿ ಶಿಂಧೆ ಅವರ ಭದ್ರಕೋಟೆಯಾಗಿರುವ ಥಾಣೆ ಸ್ಥಾನವನ್ನು ಅದು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಥಾಣೆಯಲ್ಲಿ 67 ಮಾಜಿ ಕಾರ್ಪೊರೇಟರ್ಗಳು ಶಿಂಧೆ ಅವರೊಂದಿಗೆ ಇದ್ದಾರೆ. ನವಿ ಮುಂಬೈನ ಸುಮಾರು 38 ಮಾಜಿ ಕಾರ್ಪೊರೇಟರ್ಗಳು ಸಹ ಅವರಿಗೆ ಬೆಂಬಲ ನೀಡಿದ್ದಾರೆ.

ಥಾಣೆ ನಗರ ಅಥವಾ ನವಿ ಮುಂಬೈನಲ್ಲಿ ಬಿಜೆಪಿಗೆ ದೊಡ್ಡ ಅಸ್ತಿತ್ವವಿಲ್ಲ. ರಾಹುಲ್ ಶೆವಾಲೆ ಹಾಲಿ ಸಂಸದರಾಗಿರುವ ದಕ್ಷಿಣ-ಮಧ್ಯ ಲೋಕಸಭಾ ಕ್ಷೇತ್ರದಲ್ಲಿ ಶಿಂಧೆ ಸೇನೆ ಸ್ಪರ್ಧಿಸಲಿದೆ. ಈ ಕ್ಷೇತ್ರದಿಂದ ಶಿವಸೇನೆ (ಯುಬಿಟಿ) ಅನಿಲ್ ದೇಸಾಯಿ (Anil Desai) ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಜಿತ್ ಪವಾರ್ ಅವರ ಎನ್ಸಿಪಿಯು ನಾಲ್ಕು ಕ್ಷೇತ್ರಗಳನ್ನು ಪಡೆದುಕೊಂಡಿದ್ದಾರೆ. ಬಾರಾಮತಿ, ರಾಯ್ಗಢ, ಶಿರೂರು ಮತ್ತು ಪರ್ಭಾನಿ ಕ್ಷೇತ್ರಗಳಿಂದ ಎನ್ಸಿಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಬಾರಾಮತಿಯಿಂದ ಹಾಲಿ ಸಂಸದೆ ಸುಪ್ರಿಯಾ ಸುಳೆ ಅವರು ಅಜಿತ್ ಪವಾರ್ (Ajith Pavaar) ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಕುಟುಂಬ ಕಾಳಗ ನಡೆಯಲಿದೆ.

Exit mobile version