ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗದ ಅನುಮತಿ ಬೇಕು – ಬಸವರಾಜ್ ಬೊಮ್ಮಾಯಿ

MEKEDATU

 ಬೆಂಗಳೂರು ನ 09ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗ(Central Water Commission)ದ ಅನುಮತಿ ಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಸಿಎಂ ಹೇಳಿಕೆ ಉಲ್ಲೇಖಿಸಿ ಕರ್ನಾಟಕ ಬಿಜೆಪಿ ಮಂಗಳವಾರ ಟ್ವೀಟ್ ಮಾಡಿದೆ. ‘ಮೇಕೆದಾಟು ಯೋಜನೆ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಸರ್ಕಾರ ಕಾನೂನು ಹೋರಾಟ ಮಾಡುತ್ತಿದೆ. ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗದ ಅನುಮತಿ ಬೇಕಾಗಿದೆ. ಶೀಘ್ರವೇ ಅನುಮತಿ ಲಭಿಸುವ ವಿಶ್ವಾಸವಿದೆ. ಅನುಮತಿ ಸಿಗುತ್ತಿದ್ದಂತೆಯೇ ಯೋಜನೆ ಜಾರಿಗೊಳಿಸುತ್ತೇವೆ’ ಎಂದು ಹೇಳಿದ್ದಾರೆ.

‘ಮೇಕೆದಾಟು ಯೋಜನೆ ಡಿಪಿಆರ್ ತಯಾರಿಸಲು ಕಾಂಗ್ರೆಸ್ ಸರ್ಕಾರ ಹಲವು ವರ್ಷಗಳನ್ನೇ ತೆಗೆದುಕೊಂಡಿತು. ಆಗಲೇ ತ್ವರಿತವಾಗಿ ಡಿಪಿಆರ್ ಸಿದ್ಧಪಡಿಸಿ ಯೋಜನೆಯನ್ನು ಜಾರಿ ಮಾಡುವ ಬದ್ಧತೆ ಏಕೆ ತೋರಲಿಲ್ಲ?’ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಯನ್ನು ಏಕೆ ಜಾರಿಗೊಳಿಸಲಿಲ್ಲ? ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವಂತೆ ಪಾದಯಾತ್ರೆ ಹೆಸರಿನಲ್ಲಿ ಈಗ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ’ ಎಂದು ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.

‘ರಾಜ್ಯದ ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಯಾರೊಂದಿಗೂ ನಾನು ರಾಜಿ ಆಗುವುದಿಲ್ಲ. ಮೇಕೆದಾಟು ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ವೆಂದು ಈ ಹಿಂದೆ ಸಿಎಂ ಬೊಮ್ಮಾಯಿ ಹೇಳಿದ್ದರು. ‘ಕುಡಿಯುವ ನೀರಿನ ಉದ್ದೇಶದಿಂದ ರೂಪಿಸಿರುವ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ. ಯೋಜನೆ ಜಾರಿ ಸಂಬಂಧ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ’ ಎಂದೂ ಕೂಡ ಅವರು ಭರವಸೆ ವ್ಯಕ್ತಪಡಿಸಿದ್ದರು.   

‘ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿಯನ್ನು ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ  ಉದ್ದೇಶಕ್ಕೆ ಬಳಸುವ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕು ರಾಜ್ಯಕ್ಕಿದೆ. ರಾಜ್ಯದ ಜನರ ಹಿತ ರಕ್ಷಣೆಗಾಗಿ 100ಕ್ಕೆ 100ರಷ್ಟು ಯೋಜನೆ ಜಾರಿಗೊಳಿಸಲಾಗುವುದು’ ಅಂತಾ ಬೊಮ್ಮಾಯಿ ಹೇಳಿದ್ದರು.

Exit mobile version