ರಾಜ್ಯದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್, ದೇಶದ ಮಹಾನಗರ ಪೈಕಿ ಎರಡನೇ ಸ್ಥಾನದಲ್ಲಿ ಬೆಂಗಳೂರು

ಬೆಂಗಳೂರು ಅ 13 : ರಾಜ್ಯದಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳವಾಗುತ್ತಿದ್ದು, ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ 40 ಮಂದಿಯಲ್ಲಿ ಈ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅಲ್ಲದೆ, ದೇಶದ ಮಹಾನಗರ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಸ್ತನ ಕ್ಯಾನ್ಸರ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಹಲವಾರು ಕ್ರಮ ಕೈಗೊಂಡರೂ ಪ್ರಕರಣಗಳು ಉಲ್ಬಣವಾಗುತ್ತಿವೆ. ರಾಜಧಾನಿಯಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ 4% ರಷ್ಟು ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ 26,000 ರಿಂದ 30,000 ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ.

ಕಿದ್ವಾಯಿ ಮೆಮೋರಿಯನ್ ಇನ್‌ಸ್ಟಿಟ್ಟಯೂಟ್ ಆಫ್ ಆಂಕಾಲಜಿ ನಿರ್ದೇಶಕ ಡಾ. ಸಿ. ರಾಮಚಂದ್ರನ್ ಅವರು ಹೇಳುವಂತೆ ಕಿದ್ವಾಯಿಯಲ್ಲಿ ಪ್ರತಿ ವರ್ಷ ಸುಮಾರು 800 ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತವೆ. ‘ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಶೇ50ಕ್ಕಿಂತ ಹೆಚ್ಚು ರೋಗಿಗಳು ಮೂರನೇ ಅಥವಾ ನಾಲ್ಕನೇ ಹಂತದ ರೋಗಲಕ್ಷಣದೊಂದಿಗೆ ಬರುತ್ತಿದ್ದಾರೆ. ಇದು ಕಾಳಜಿ ವಹಿಸಬೇಕಾದ ವಿಷಯವಾಗಿದೆ. ಆರಂಭಿಕ ಹಂತದಲ್ಲಿ ಪತ್ತೆಯಾದಲ್ಲಿ ಆ ಕ್ಯಾನ್ಸರ್ ಅನ್ನು ಗುಣಪಡಿಸುವ ಅವಕಾಶವು ಶೇ 90ರಷ್ಟಿರುತ್ತದೆ. ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಸ್ತನ ಕ್ಯಾನ್ಸರ್‌ನಿಂದ ಬದುಕುಳಿಯುವ ಪ್ರಮಾಣವು ಕಡಿಮೆಯಾಗಿದೆ. ಅಮೆರಿಕ (89%), ಬ್ರಿಟನ್ (82%)ಕ್ಕೆ ಹೋಲಿಸಿದರೆ, ಐದು ವರ್ಷಗಳಲ್ಲಿ ಒಟ್ಟಾರೆ ಕ್ಯಾನ್ಸರ್‌ಗೆ ತುತ್ತಾಗಿ ಬದುಕುಳಿಯುವ ಪ್ರಮಾಣವು ಶೇ 65-70ರಷ್ಟಿದೆ’ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಕ್ಯಾನ್ಸರ್ ಅಂಕಿ ಅಂಶಗಳನ್ನು ನೋಡುವುದಾದರೆ

ಹೊಸ ಕ್ಯಾನ್ಸರ್ ಪ್ರಕರಣಗಳು 78,384, ಪ್ರಚಲಿತ ಕ್ಯಾನ್ಸರ್ ಪ್ರಕರಣಗಳು 1,74,000 ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳು  43,640 ಸ್ತನ ಕ್ಯಾನ್ಸರ್ ಪ್ರಕರಣಗಳು 9,837 (ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳಲ್ಲಿ 22%) ಪ್ರಚಲಿತ ಸ್ತನ ಕ್ಯಾನ್ಸರ್ ಪ್ರಕರಣಗಳು 26,560 ದಾಖಲಾಗಿವೆ

Exit mobile version