ನೋಯ್ಡಾ(Noida) ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ(UttarPradesh) ಬಿಜೆಪಿ ಮುಖಂಡ(BJP) ಶ್ರೀಕಾಂತ್ ತ್ಯಾಗಿ(Srikanth Tyagi) ವಿರುದ್ಧ ನೋಯ್ಡಾ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದರು. ಈ ಸಂದರ್ಭದಲ್ಲಿ, ಬಿಜೆಪಿ ನಾಯಕರ ಜೊತೆಗಿನ ಶ್ರೀಕಾಂತ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral) ಆಗಿದ್ದವು. ಈತ ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಮತ್ತು ಆಡಳಿತ ಪಕ್ಷದ ಯುವ ಕಿಸಾನ್ ಸಮಿತಿಯ ರಾಷ್ಟ್ರೀಯ ಸಂಯೋಜಕರಾಗಿ ಗುರುತಿಸಿಕೊಂಡಿದ್ದ.

ಆದರೆ ಇದೀಗ ಬಿಜೆಪಿ ಸ್ಥಳೀಯ ಘಟಕವು ಆತ ನಮ್ಮ ಪಕ್ಷದ ಸದಸ್ಯ ಅಲ್ಲ, ಆತ ಪಕ್ಷದ ಪ್ರಾರ್ಥಮಿಕ ಸದಸ್ಯತ್ವವನ್ನೂ ಹೊಂದಿಲ್ಲ ಎಂದು ಹೇಳಿಕೆ ನೀಡಿದೆ. ನಂತರ, ಶ್ರೀಕಾಂತ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಆತನನ್ನು ಪತ್ತೆ ಹಚ್ಚಲು ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತೆ ಅಂಕಿತಾ ಶರ್ಮಾ ತಿಳಿಸಿದ್ದರು. ಈಗಾಗಲೇ ಮಹಿಳೆಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಶ್ರೀಕಾಂತ್ ತ್ಯಾಗಿಗೆ ನೋಯ್ಡಾ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ.
ಶ್ರೀಕಾಂತ್ ತ್ಯಾಗಿ ಮಾಲೀಕತ್ವದ ‘ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್’ ಅಕ್ರಮವಾಗಿದ್ದು, ಅಧಿಕಾರಿಗಳು ಬುಲ್ಡೋಜರ್(Buldozer) ಬಳಸಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು ಹಾಗೂ ತ್ಯಾಗಿ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದಿರುವ ವಿಡಿಯೋ ಕೂಡ ವೈರಲ್(Viral) ಆಗಿದೆ. ಇನ್ನು, ನೋಯ್ಡಾದ ಸೆಕ್ಟರ್ 93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್ ಅತಿಕ್ರಮ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು 2019ರಲ್ಲೇ ನೋಟಿಸ್ ನೀಡಿದ್ದರು.

ಆದರೆ ಶ್ರೀಕಾಂತ್ ತ್ಯಾಗಿ ತಮ್ಮ ಪ್ರಭಾವ ಬಳಸಿ ಕಟ್ಟಡ ತೆರವುಗೊಳಿಸಲು ಅಡ್ಡಿಯಾಗಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದರಿಂದ ಬುಲ್ಡೋಜರ್ ಸೇರಿದಂತೆ ಎಲ್ಲಾ ಸಲಕರಣೆ ಹಾಗೂ ಭದ್ರತೆಯೊಂದಿಗೆ ಆಗಮಿಸಿದ ಅಧಿಕಾರಿಗಳು ಸುಸಜ್ಜಿತ ಕಾಂಪ್ಲೆಕ್ಸ್ ಅನ್ನು ಕೆಡವಿದ್ದಾರೆ. ಅಧಿಕಾರಿಗಳು ಬುಲ್ಡೋಜರ್ ಸಹಾಯದಿಂದ ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್ ಕಟ್ಟಡ ಕೆಡವುತ್ತಿದ್ದಂತೆ ವಸತಿ ಸಮುಚ್ಚಯ ನಿವಾಸಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸುವ ಮೂಲಕ ತ್ಯಾಗಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ರಾತ್ರಿ ವಸತಿ ಸಮುಚ್ಚಯಕ್ಕೆ ಶ್ರೀಕಾಂತ್ ತ್ಯಾಗಿ ಕಳುಹಿಸಿದ ಗೂಂಡಾಗಳು ಆಗಮಿಸಿ ನಿವಾಸಿಗಳಿಗೆ ಕಿರುಕುಳ ನೀಡತೊಡಗಿದ್ದರು, ಈ ವೇಳೆ ವಾಗ್ವಾದಕ್ಕೆ ನಿಂತ ಮಹಿಳೆಗೆ ಕೂಡ ಕಿರುಕುಳ ನೀಡಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು 6 ಗೂಂಡಾಗಳನ್ನು ಬಂಧಿಸಿದ್ದಾರೆ. ಶ್ರೀಕಾಂತ್ ತ್ಯಾಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗ್ರ್ಯಾಂಡ್ ಓಮ್ಯಾಕ್ಸ್ ಕಾಂಪ್ಲೆಕ್ಸ್ ಬೃಹತ್ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆಯಿಂದ ಶ್ರೀಕಾಂತ್ ತ್ಯಾಗಿ ಸಿಟ್ಟಿಗೆದ್ದಿದ್ದು, ರಹಸ್ಯ ಸ್ಥಳದಿಂದಲೇ ತಮ್ಮ ಬೆಂಬಲಿಗರಿಗೆ ಸೂಚನೆ ನೀಡುತ್ತಿದ್ದಾರೆ.

ಅಧಿಕಾರಿಗಳ ವಿರುದ್ದ ಪ್ರತಿಭಟನೆಗೆ ಸೂಚಿಸಿದ್ದಾರೆ. ಆದರೆ ಕಾಂಪ್ಲೆಕ್ಸ್ ಸಮೀಪದ ವಸತಿ ಸಮುಚ್ಚಯದ ನಿವಾಸಿಗಳು ಶ್ರೀಕಾಂತ್ ತ್ಯಾಗಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಗೆ ಕಿರುಕುಳ ನೀಡಿರುವ ಗಂಭೀರ ಆರೋಪ ಹೊತ್ತಿರುವ ಶ್ರೀಕಾಂತ್ ತ್ಯಾಗಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.