ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದದ್ದು ಅನ್ನದಾನ. ಹಾಗಾಗಿಯೇ ನಮ್ಮ ದೇಶದಲ್ಲಿ ಅನ್ನದಾನಕ್ಕೆ ಬಹಳ ಮಹತ್ವವಿದೆ. ಹಲವಾರು ದೇವಸ್ಥಾನಗಳಲ್ಲಿ, ಪ್ರಸಾದದ ರೂಪದಲ್ಲಿ ಅನ್ನದಾನವನ್ನು ನಡೆಸಲಾಗುತ್ತದೆ. ಅದರಲ್ಲೂ ಧರ್ಮಸ್ಥಳದಲ್ಲಿ(Dharmasthala) ಸಿಗುವ ಅನ್ನಪ್ರಸಾದದ ರುಚಿಯನ್ನು ಸವಿದವರೇ ಬಲ್ಲರು. ಯಾರೇ ಆಗಲಿ ಧರ್ಮಸ್ಥಳಕ್ಕೆ ಹೋದರೆ ಅಲ್ಲಿ ಪ್ರಸಾದ ಸ್ವೀಕರಿಸದೆ ಹಿಂತಿರುಗಿ ಬರುವ ಮಾತೇ ಇಲ್ಲ. ಸಾಕ್ಷಾತ್ ಮಾತೆ ಅನ್ನಪೂರ್ಣೇಶ್ವರಿಯೇ ನೆಲೆಸಿರುವ ಧರ್ಮದ ಕ್ಷೇತ್ರವಾದ ಧರ್ಮಸ್ಥಳ, ಸತ್ಯ ನಿಷ್ಠೆ ಧರ್ಮಕ್ಕೆ ಹೆಸರಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದಕ್ಷಿಣ ಭಾರತದ ಆರಾಧ್ಯ ದೈವ ಮಂಜುನಾಥ ಸ್ವಾಮಿ ನೆಲೆಸಿದ್ದಾರೆ. ಸ್ವಾಮಿಯ ದರ್ಶನಕ್ಕೆಂದು ಬರುವ ಭಕ್ತರ ಸಂಖ್ಯೆ ಅಪಾರ. ಹಾಗಾಗಿ, ಧರ್ಮಸ್ಥಳಕ್ಕೆ ಬಂದಂತಹ ಯಾವುದೇ ಭಕ್ತರು ಹಸಿವಿನಿಂದ ಮರಳಿ ಹೋಗಬಾರದು ಎನ್ನುವ ಉದ್ದೇಶದಿಂದ, 1955 ರಿಂದಲೇ ಇಲ್ಲಿ ಅನ್ನದಾನ ಮಾಡಲು ಪ್ರಾರಂಭಿಸಲಾಯಿತು. ಇಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದವರು, ಇಂದಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ(Veerendra Hegde) ತಂದೆಯವರು. ವಿಶಾಲವಾಗಿರುವ ಈ ಭೋಜನ ಸ್ಥಳದಲ್ಲಿ ಒಂದು ದಿನಕ್ಕೆ ಕಡಿಮೆ ಎಂದರೂ 25 ರಿಂದ 50 ಸಾವಿರ ಜನ ಊಟ ಮಾಡುತ್ತಾರೆ!
ಇನ್ನು, ದೀಪೋತ್ಸವದ ಸಂದರ್ಭದಲ್ಲಂತೂ ಹೆಚ್ಚು ಕಡಿಮೆ ಒಂದು ಲಕ್ಷ ಜನ ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಧರ್ಮಸ್ಥಳ ಕ್ಷೇತ್ರ ಪ್ರಸಿದ್ಧವಾಗಿರುವುದೇ ಶುಚಿ ರುಚಿಯಾದ ಅನ್ನ ಪ್ರಸಾದದಿಂದ. ಇಲ್ಲಿನ ಅಡುಗೆಯ ಬಗ್ಗೆ ಗಮನಿಸಬೇಕಾದ ವಿಷಯ ಏನು ಎಂದರೆ, ಇಲ್ಲಿ ಮೊದಲು ಆದ್ಯತೆ ನೀಡುವುದೇ ಸ್ವಚ್ಛತೆಗೆ. ನಿಮಗೆ ತಿಳಿದಿರಬಹುದು, ನಮ್ಮ ಧರ್ಮಸ್ಥಳದ ದೇವಸ್ಥಾನದಲ್ಲಿ ಕಾಪಾಡಿಕೊಳ್ಳಲಾಗುತ್ತಿರುವ ಸ್ವಚ್ಚತೆಯ ಬಗ್ಗೆ ಸುಪ್ರೀಂಕೋರ್ಟ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ!
ಹೌದು, ಇಲ್ಲಿ ಬಳಸುವ ಸಾಮಗ್ರಿಯಿಂದ ಹಿಡಿದು ಅಡುಗೆವರೆಗೆ ಎಲ್ಲಾ ಕಡೆಯೂ ಆಧುನಿಕ ತಂತ್ರಜ್ಞಾನವನ್ನೇ ಉಪಯೋಗಿಸುತ್ತಾರೆ.

ಕೇವಲ ಒಂದೇ ದಿನಕ್ಕೆ ಸುಮಾರು ಎಂಟೂವರೆ ಸಾವಿರ ಕೆಜಿ ಅಕ್ಕಿ ಬಳಸಿ ಊಟ ತಯಾರು ಮಾಡುತ್ತಾರೆ. ಜೊತೆಗೆ, ಮೂರುವರೆ ಸಾವಿರ ಕೆಜಿ ತರಕಾರಿ ಬಳಸಿ ಸಾಂಬಾರು ಮಾಡಲಾಗುತ್ತದೆ. ಇಲ್ಲಿರುವ ವಿಶಾಲವಾದ ಭೋಜನ ಶಾಲೆಯಲ್ಲಿ ಒಂಬತ್ತು ಸಾಲುಗಳಲ್ಲಿ ಭಕ್ತಾದಿಗಳು ಕೂತು ಊಟ ಮಾಡಬಹುದು. ಒಂದು ಸಾಲಿನಲ್ಲಿ ಕಡಿಮೆ ಎಂದರೂ 400 ಜನ ಕುಳಿತು ಊಟ ಮಾಡಬಹುದು. ಇನ್ನೊಂದು ಮುಖ್ಯವಾದ ವಿಷಯ ಎಂದರೆ, ಧರ್ಮಸ್ಥಳದಲ್ಲಿ ಸಿಗುವಂತಹ ಆನ್ನ ಪ್ರಸಾದ ನಮ್ಮ ದೇಶದ ಬೇರೆ ಯಾವುದೇ ದೇವಸ್ಥಾನಗಳಲ್ಲಿ ಕೂಡ ಸಿಗುವುದಿಲ್ಲ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ, ಈ ನಮ್ಮ ಧರ್ಮಸ್ಥಳದ ಅನ್ನ ಪ್ರಸಾದ.
ಹಸಿದವರಿಗೆ ಅನ್ನ ನೀಡುವುದು ಪ್ರತಿಯೊಬ್ಬರು ಪಾಲಿಸಬೇಕಾದ ಧರ್ಮ. ಇಂತಹ ಧರ್ಮ ಪಾಲನೆ ಮಾಡುತ್ತಿರುವ ಧರ್ಮಸ್ಥಳದ ಮಹಿಮೆ ಅಪಾರ. ಇಲ್ಲಿ ನಡೆಯುವ ನಿತ್ಯ ದಾಸೋಹಕ್ಕೆ ಎಂದಿಗೂ ಅಡೆತಡೆಗಳು ಎದುರಾಗುವುದಿಲ್ಲ, ಇದಕ್ಕೆ ಕಾರಣ ಮಾತೆ ಅನ್ನಪೂರ್ಣೇಶ್ವರಿಯ ಅನುಗ್ರಹ ಹಾಗೂ ಮಂಜುನಾಥೇಶ್ವರನ ಕೃಪೆ ಎನ್ನುವುದು ನಂಬಿಕೆ. ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಇನ್ನೂ ಧರ್ಮಸ್ಥಳಕ್ಕೆ ಭೇಟಿ ನೀಡದೆ ಇರುವವರು, ಒಮ್ಮೆ ಧರ್ಮಸ್ಥಳಕ್ಕೆ ಹೋಗಿ, ಅಲ್ಲಿಯ ಅನ್ನ ಪ್ರಸಾದ ಸ್ವೀಕರಿಸಿ ಮಂಜುನಾಥನ ಅನುಗ್ರಹಕ್ಕೆ ಪಾತ್ರರಾಗಿ.
- ಪವಿತ್ರ