ಶತಕದ ಗಡಿದಾಟಿದ ಪೆಟ್ರೋಲ್ ಬೆಲೆ: ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು, ಜೂ. 11: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್‌ನಿಂದ 100 ನಾಟ್‌ ಔಟ್‌ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯದಲ್ಲೂ ಕೇಂದ್ರದ ವಿರುದ್ಧ ಆಕ್ರೋಶದ ಕಿಚ್ಚು ಹೊತ್ತಿಕೊಂಡಿದೆ.

ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಭಾಗಿಯಾಗಿದ್ದರು. ದಿನನಿತ್ಯ ಪೆಟ್ರೋಲ್, ಡೀಸೆಲ್‌ ಬೆಲೆ ಹೆಚ್ಚಳವಾಗುತ್ತಿದೆ. ಜನಸಾಮಾನ್ಯರು ಖರೀದಿ ಮಾಡುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಖಾಲಿ ತಟ್ಟೆ ಬಡಿದು ಪ್ರತಿಭಟಿಸಿದರು.

ಎಐಸಿಸಿ ನಿರ್ಧಾರದಂತೆ ಪ್ರತಿಭಟನೆ ಮಾಡುತ್ತಿದ್ದೇವೆ. ಮೋದಿ ಅವರು ಶತಕ ಬಾರಿಸುವಂತೆಯೇ ಆಟವಾಡಿದ್ದಾರೆ. ಎರಡು, ಮೂರು ಶತಕ ಹೊಡೆದಿದ್ದಾರೆ. ನೋಟು ಅಮಾನ್ಯೀಕರಣ ಮಾಡಿ ಜನರನ್ನು ಕ್ಯೂ ನಿಲ್ಲಿಸಿದರು. ಕೋವಿಡ್ ಬಂದು ಜನರ ಪರಿಸ್ಥಿತಿ ಅಯೋಮಯವಾಗಿದೆ. ಮೋದಿ ಅವರ ಬಿಳಿ ಗಡ್ಡ, ಪೆಟ್ರೋಲ್ ಬೆಲೆ ಮಾತ್ರ ಬೆಳೆಯುತ್ತಿದೆ. ಈ ರೀತಿಯ ಆಡಳಿತ ದೇಶದ ಪರಿಸ್ಥಿತಿಯನ್ನು ಹದಗೆಡಿಸಿದೆ ಎಂದು ದಿನೇಶ್‌ ಗುಂಡೂರಾವ್‌ ಕಿಡಿಕಾರಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ಬೆಲೆ ಹೆಚ್ಚಾಗಿತ್ತು, ಆದರೂ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿತ್ತು. ಈಗ ಕಡಿಮೆ ದರ ಇದ್ದರೂ ಹೆಚ್ಚು ಬೆಲೆಗೆ ಮಾರಲಾಗುತ್ತಿದೆ. ತೆರಿಗೆ ಕಡಿಮೆಯಾಗಲಿ ಎಂಬುದೇ ನಮ್ಮ ಆಗ್ರಹ. ಇದು ರಾಜ್ಯ ಸರ್ಕಾರದಲ್ಲೂ ಆಗಲಿ ಎಂದು ಆಗ್ರಹಿಸಿದರು.

Exit mobile version