ಮಾಯಾವತಿ(Mayavathi) ಅವರು ತಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ ಇಡೀ ಬಿಎಸ್‍ಪಿ(BSP) ಪಕ್ಷವನ್ನು ಕೋಮುವಾದಿ ಬಿಜೆಪಿ(BJP) ಪಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಭೀಮ್ ಆರ್ಮಿ(Bheem Army) ಮುಖ್ಯಸ್ಥ ಚಂದ್ರಶೇಖರ್ ಆಜಾದ್(Chandrashekar Azad) ಮಾಯಾವತಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್‍ನ(Jharkhand) ಗರ್ವಾ(Gharwa) ಜಿಲ್ಲೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮಾಯಾವತಿ ಅವರು ಇಂದು ತೆಗೆದುಕೊಳ್ಳುತ್ತಿರುವ ಕ್ರಮಗಳು ಬಾಬಾ ಸಾಹೇಬ್ ಅಂಬೇಡ್ಕರ್(Dr. BR Ambedkar) ಅವರ ತತ್ವಗಳಿಗೆ ವಿರುದ್ದವಾಗಿದೆ. ಮಾಯಾವತಿ ಅವರ ನಿರ್ಧಾರಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳಿಗೆ ತೀವ್ರ ಹಾನಿಯುಂಟು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಯಾವತಿ ತಮ್ಮ, ತಮ್ಮ ಸಹೋದರ ಮತ್ತು ಸಂಬಂಧಿಕರನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಆ ಮೂಲಕ ಬಾಬಾ ಸಾಹೇಬರ ಆದರ್ಶಗಳನ್ನು ಬಿಟ್ಟು ಮೋದಿ ಮುಂದೆ ಶರಣಾಗಿದ್ದಾರೆ. ದಶಕಗಳ ಕಾಲ ಮಾಯಾವತಿ ಮತ್ತು ಬಿಎಸ್‍ಪಿ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿರುವ ದಲಿತರಿಗೆ ದ್ರೋಹ ಬಗೆದಿದ್ದಾರೆ. ಮಯಾವತಿ ಅವರ ಈ ನಡೆಯನ್ನು ಭೀಮ್ ಆರ್ಮಿ ಎಂದಿಗೂ ಸಹಿಸುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಗಳ ಉಳಿವಿಗಾಗಿ ನಾವು ಹೋರಾಟ ನಡೆಸುತ್ತೇವೆ. ಕೋಮುವಾದಿ ಬಿಜೆಪಿಯೊಂದಿಗೆ ರಾಜೀಯಾಗುವ ಪ್ರಶ್ನೆ ನಮ್ಮ ಮುಂದೆ ಇಲ್ಲ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜಕೀಯಕ್ಕಾಗಿ ಮಾತ್ರ ದಲಿತರನ್ನು ಬಳಸಿಕೊಳ್ಳುತ್ತಿವೆ. ದಲಿತರನ್ನು ಬಳಸಿಕೊಂಡು ಅಧಿಕಾರ ಹಿಡಿದು, ದಲಿತರನ್ನೇ ಹತ್ತಿಕ್ಕುವ ಕೆಲಸವನ್ನು ಈ ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಭೀಮ್ ಆರ್ಮಿ ಹೊಸ ರಾಜಕೀಯ ಶಕ್ತಿಯಾಗಿ ಉದಯಿಸಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಕಿತ್ತೊಗೆದು, ನಾವು ಅಧಿಕಾರ ಹಿಡಿಯುವ ದಿನಗಳು ದೂರವಿಲ್ಲ ಎಂದರು.