ಚರ್ಮದ ಆರೋಗ್ಯ ವೃದ್ಧಿಯಲ್ಲಿ ಎಣ್ಣೆಯ ಮಹತ್ವ

ಚಳಿಗಾಲದಲ್ಲಿ ನಾವು ಚರ್ಮದ ರಕ್ಷಣೆಗೆ ಅನೇಕ ಕ್ರೀಮ್‌ಗಳನ್ನು ಹಾಗೂ ಬಾಡಿ ಲೋಷನ್‌ಗಳಿಗೆ ಮೊರೆ ಹೋಗುತ್ತೇವೆ.  ಬರೀ ಕ್ರೀಮ್‌ಗಳ ಮೊರೆಹೋಗುವ ಬದಲು ಆಯಾ ಕಾಲಕ್ಕೆ ತಕ್ಕಂತೆ ನಾವು ಎಣ್ಣೆಗಳ ಬಳಕೆಯನ್ನೂ ಮಾಡಿಕೊಳ್ಳುವುದರಿಂದ  ಚರ್ಮದ ರಕ್ಷಣೆ ಮಾಡಬಹುದಾಗಿದೆ.

ಮಳೆ, ಚಳಿ, ಉಷ್ಣ ಎಲ್ಲಾ ಕಾಲಕ್ಕೂ ನಮ್ಮ ಚರ್ಮದ ರಕ್ಷಣೆಯಲ್ಲಿ ಎಳ್ಳೆಣ್ಣೆ ಮಹತ್ತರ ಪಾತ್ರವಹಿಸುತ್ತದೆ. ಎಳ್ಳೆಣ್ಣೆಗೆ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದ್ದು, ತಂಪು ಗುಣವನ್ನು ಹೊಂದಿದೆ. ಅಡುಗೆಗೆ, ಸೌಂದರ್ಯವರ್ದಕಕ್ಕೆ, ಸಾಬೂನಿನ ತಯಾರಿಕೆ ಶಾಂಪೂ ಮೊಯಿಶ್ಚರೈಸರ್ ಔಷಧಿ ತಯಾರಿಕೆ ಹಾಗೂ ಮಸಾಜ್ ಚಿಕಿತ್ಸೆಯಲ್ಲಿ ಹೆಚ್ಚಾಗಿ ಎಳ್ಳೆಣ್ಣೆಯನ್ನೇ ಬಳಸುತ್ತಾರೆ.

ನಿದ್ದೆ ಬಾರದಿದ್ದರೆ ,ಸ್ನಾಯುಗಳ ಸೆಳೆತವಿದ್ದರೆ, ಚರ್ಮ ಸುಕ್ಕುಗಟ್ಟಿದ್ದರೆ,  ಹೊಳೆಯುವ ಚರ್ಮಕ್ಕೆ ಹಾಗೂ  ರಕ್ತ ಪರಿಚಲನೆ ಸರಾಗವಾಗಲು ಎಳ್ಳೆಣ್ಣೆಯನ್ನು ಹಾಕಿ ಮಸಾಜ್ ಮಾಡಿದ್ರೆ ಒಳ್ಳೆಯ ಪರಿಣಾಮ ಕಾಣಬಹುದಾಗಿದೆ. ಸ್ನಾನ ಮಾಡುವ ಅರ್ದ ಗಂಟೆಗೆ ಮೊದಲು ತಲೆಯಿಂದ ಕಾಲಿನವರೆಗೆ  ಎಳ್ಳೆಣ್ಣೆಯನ್ನು  ಸ್ವಲ್ಪ ಬಿಸಿ ಮಾಡಿ ತಣ್ಣಗಾದ ಬಳಿಕ ಚೆನ್ನಾಗಿ ಹಚ್ಚಿಕೊಂಡು, ಬಳಿಕ ಸ್ನಾನ ಮಾಡಬೇಕು.

ಕೂದಲಿಗೂ, ಚರ್ಮಕ್ಕೂ, ವಾತದೋಷವಿದ್ದವರು ಎಳ್ಳೆಣ್ಣೆಯನ್ನು ಮಸಾಜ್ ಮಾಡಿದ್ರೆ ಉತ್ತಮ. ನೆತ್ತಿಗೆ ಯಥೇಚ್ಚವಾಗಿ ಈ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.

Exit mobile version