ಛತ್ತೀಸ್ ಗಡ್: ಜೂನ್ 1 ರಿಂದ ಮನೆಯಲ್ಲಿಯೇ 12 ತರಗತಿ ಪರೀಕ್ಷೆ

ಛತ್ತೀಸ್ ಗಡ್, ಮೇ. 24: ಜೂನ್ 1ರಿಂದ 12ನೇ ತರಗತಿಯ ಪರೀಕ್ಷೆಗಳನ್ನು ನಡೆಸಲು ಛತ್ತೀಸ್ಗಢ ಸೆಕೆಂಡರಿ ಎಜುಕೇಶನ್ ಬೋರ್ಡ್ (ಸಿಜಿಬಿಎಸ್ಇ) ನಿರ್ಧರಿಸಿದೆ. ನಿಗದಿತ ಕೇಂದ್ರಗಳಿಂದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಮನೆಗಳಲ್ಲಿಯೇ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಜಿಬಿಎಸ್ಇ ಕಾರ್ಯದರ್ಶಿ ವಿ.ಕೆ.ಗೋಯಲ್ ಅವರು ಶನಿವಾರ ಆದೇಶ ಹೊರಡಿಸಿದ್ದು, ರಾಜ್ಯದ 2.86 ಲಕ್ಷ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮನೆಗಳಲ್ಲಿಯೇ ಪರೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಆದೇಶದ ಪ್ರಕಾರ, 12ನೇ ತರಗತಿಯ ವಿದ್ಯಾರ್ಥಿಗಳು ಜೂನ್ 1ರಿಂದ ಐದು ದಿನಗಳವರೆಗೂ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಪತ್ರಿಕೆ ಖಾಲಿ ಹಾಳೆಗಳನ್ನು ನಿಗದಿತ ಕೇಂದ್ರಗಳಿಂದ ಪಡೆಯಬಹುದು. ಜೂನ್ 1ರಿಂದ 5ರೊಳಗೆ ಯಾವುದೇ ದಿನ ಪ್ರಶ್ನೆಪತ್ರಿಕೆಗಳನ್ನು ಪಡೆಯಬಹುದಾಗಿದ್ದು, ಪ್ರಶ್ನೆಪತ್ರಿಕೆ ತೆಗೆದುಕೊಂಡ ಐದು ದಿನಗಳ ಒಳಗಾಗಿ ವಿದ್ಯಾರ್ಥಿಗಳೇ ಖುದ್ದು ಬಂದು ಉತ್ತರ ಪತ್ರಿಕೆಗಳನ್ನು ನಿಗದಿತ ಕೇಂದ್ರಗಳಿಗೆ ಸಲ್ಲಿಸಬೇಕಾಗುತ್ತದೆ.

ಭಾನುವಾರ ಮತ್ತು ರಜೆ ದಿನಗಳಲ್ಲಿಯೂ ಉತ್ತರ ಪತ್ರಿಕೆಗಳನ್ನು ಸಲ್ಲಿಸಬಹುದಾಗಿದ್ದು, ನಿಗದಿತ ಅವಧಿಯೊಳಗೆ ಉತ್ತರ ಪತ್ರಿಕೆಗಳು ಸಲ್ಲಿಕೆಯಾಗದಿದ್ದರೆ, ಅಂತಹ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಗೈರು ಹಾಜರು ಎಂದು ಪರಿಗಣಿಸಲಾಗುತ್ತದೆ ಎಂದು ಗೋಯಲ್ ಹೇಳಿದ್ದಾರೆ.

Exit mobile version