ಕುಡಿದು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ ಪೊಲೀಸರು ; ಕೇಸ್ ದಾಖಲಿಸಿಕೊಳ್ಳದೆ ಕಾನೂನು ಉಲ್ಲಂಘನೆ!

Lorry driver

ಚಿಕ್ಕಮಗಳೂರು : ಚಿಕ್ಕಮಗಳೂರಿನ 3 ಮಂದಿ ಪೊಲೀಸರು, ಕುಡಿದ ಅಮಲಿನಲ್ಲಿ ಮನಬಂದಂತೆ ಕಾರನ್ನು ಚಲಾಯಿಸಿ, ಲಾರಿಗೆ ಡಿಕ್ಕಿ ಹೊಡೆದು, ಲಾರಿ ಓಡಿಸುತ್ತಿದ್ದ ಹಿರಿಯ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.


ಘಟನೆಯ ವಿವರ: ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ ಪಿ. ಜಗನ್ನಾಥ್ ಗೌಡ ಎಂಬುವರು ಕಳೆದ 25 ವರ್ಷಗಳಿಂದ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. 25 ವರ್ಷಗಳಿಂದ ಟ್ಯಾಂಕರ್ ಲಾರಿಯನ್ನು ಮಂಗಳೂರಿನಿಂದ ಬಳ್ಳಾರಿಗೆ ಡೀಸೆಲ್ ಹಾಗೂ ಪೆಟ್ರೋಲ್ ತುಂಬಿಸಿಕೊಂಡು ಹೋಗುವುದು ಇವರ ನಿತ್ಯ ಕೆಲಸ.

ಅದರಂತೆಯೇ ದಿನಾಂಕ 06/08/2022 ರಂದು ಕೂಡ ಮಂಗಳೂರಿನಿಂದ- ಬಳ್ಳಾರಿಗೆ ಡಿಸೇಲ್ ಹಾಗೂ ಪೆಟ್ರೋಲ್ ತುಂಬಿಸಿಕೊಂಡು ಮೂಡಿಗೆರೆ ತಾಲ್ಲೂಕಿನ, ಚಕ್ಕಮಕ್ಕಿ ಸಮೀಪ ಹಾದುಹೋಗುವಾಗ, ರಾತ್ರಿ ಸುಮಾರು 8:30ರ ಸಮಯಕ್ಕೆ ಕೆ.ಎ 18 ಜೆಡ್ 5576 ನಂಬರ್ ಒಳಗೊಂಡ ಬಲೇನೋ ಕಾರಿನಲ್ಲಿ ಬರುತ್ತಿದ್ದ ಪೊಲೀಸರು, ಏಕಾಏಕಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ, ಲಾರಿ ಚಾಲಕ ಜಗನ್ನಾಥ್ ಕೆಳಗಿಳಿದು ವಿಚಾರಿಸಲು ಹೋದಾಗ, ಕುಡಿದ ಆಮಲಿನಲ್ಲಿದ್ದ ಮೂವರು ಪೊಲೀಸರು, “ನೀನು ಯಾವ ಸೀಮೆ ಡ್ರೈವರ್ ___*****” ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಚಾಲಕನ ಕೈ, ಕಾಲು ಸೇರಿದಂತೆ ಗುಪ್ತಾಂಗದ ಜಾಗಕ್ಕೆ ಒದ್ದು, ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿದ ಬೆನ್ನಲ್ಲೇ ಚಾಲಕನ ಮೇಲೆ ಕಲ್ಲು ಎಸೆದು ಹತ್ಯೆ ಮಾಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಚಾಲಕ ಪಾರಾಗಿದ್ದಾರೆ. ಕೂಡಲೇ ಈ ಗಲಾಟೆಯನ್ನು ಕಂಡ ಸ್ಥಳೀಯರು ಓಡಿ ಬರುವಷ್ಟರಲ್ಲಿ ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದಾರೆ. ಲಾರಿ ಚಾಲಕನಿಗೆ ಪೊಲೀಸರು, ನಿನ್ನ ಹಾಗೂ ನಿನ್ನ ಲಾರಿಯನ್ನು ಸುಟ್ಟು ಹಾಕುತ್ತೇವೆ ಎಂಬ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಗಂಭೀರ ಹಲ್ಲೆಗೆ ಒಳಗಾದ ಚಾಲಕ ಜಗನ್ನಾಥ್ ಅವರನ್ನು ಸ್ಥಳೀಯರು ಶೀಘ್ರವೇ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರುನಾಡು ಸಾರಥಿಗಳ ಸೈನ್ ಟ್ರೇಡ್ ಯೂನಿಯನ್ ಗುಂಪು, ಚಾಲಕ ಜಗನ್ನಾಥ್ ಪರ ನಿಂತಿದ್ದಾರೆ.

ಜಗನ್ನಾಥ್ ಅವರ ಪರ ನಿಂತು, ಬಣಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದ ಮೂವರು ಪೊಲೀಸರ ಮೇಲೆ ಪ್ರಕರಣ ದಾಖಲಿಸಲು ಹೋದ್ರೆ, ಅಲ್ಲಿನ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬುದು ಗಮನಾರ್ಹ! ಮೂವರು ಪೊಲೀಸರು ಕುಡಿದು, ವಾಹನ ಚಲಾಯಿಸಿದ್ದಲ್ಲದೇ, ಅಪಘಾತ ಮಾಡಿ, ಚಾಲಕನಿಗೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವುದರ ಬಗ್ಗೆ ದಾಖಲೆಗಳಿದ್ದು ದೂರು ನೀಡಿದರೂ ಕೂಡ, ಹಿರಿಯ ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಪ್ರಕರಣ ಕುರಿತು ಬಣಕಲ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಗಾಯತ್ರಿ ಅವರನ್ನು ಪ್ರಶ್ನಿಸಿದರೇ, ಭಾನುವಾರ ಎನ್.ಸಿ.ಆರ್(ರಾಜಿ ಮಾಡಿಕೊಳ್ಳಲು) ಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನು ಒಪ್ಪದೇ, ಮೂವರು ಪೊಲೀಸರ ಮೇಲೆ ಕೂಡಲೇ ಕ್ರಮ ಜರುಗಿಸಿ ಎಂದು ಲಾರಿ ಚಾಲಕರ ಮಾಲೀಕರ ಸಂಘದ ಸದಸ್ಯರು ಒತ್ತಾಯಿಸಿದಾಗ, ಅವರು ನಮ್ಮ ವಲಯಕ್ಕೆ ಬರುವುದಿಲ್ಲ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಠಾಣೆಗೆ ಬರುತ್ತಾರೆ ಎಂದು ಹೇಳುವ ಮೂಲಕ ಎಫ್.ಐ.ಆರ್ ದಾಖಲಿಸಿಕೊಳ್ಳದೇ ಉಡಾಫೆ ಮಾತುಗಳನ್ನಾಡಿದ್ದಾರೆ. 
ಹಲ್ಲೆಗೊಳಗಾದ ಜಗನ್ನಾಥ್ ಅವರು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. "ಜಗನ್ನಾಥ್ ಅವರಿಗೆ ಎದೆ ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತಿದ್ದರೂ, ಆಸ್ಪತ್ರೆಯ ವೈದ್ಯರು ನೀವು ಚೆನ್ನಾಗಿದ್ದೀರಿ ಡಿಸ್ಚಾರ್ಜ್ ಮಾಡಬಹುದು ಎಂದು ಹೇಳುತ್ತಿದ್ದಾರೆ. 

ಇದರಿಂದ ನಮಗೆ ಸಾಕಷ್ಟು ಗೊಂದಲ, ಅನುಮಾನ ಉದ್ಬವವಾಗುತ್ತಿದೆ” ಎಂದು ಚಾಲಕನ ಸಹಾಯಕ್ಕೆ ನಿಂತಿರುವ ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುನೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುನೀಲ್ ಕೊಟ್ಟಿರುವ ಮಾಹಿತಿಯ ಅನುಸಾರ, ಹಲ್ಲೆ ಮಾಡಿದ ಮೂವರು ಪೊಲೀಸರು ಕುಡಿದು ವಾಹನ ಓಡಿಸಿ, ಅಪಘಾತ ಮಾಡಿ, ಹಲ್ಲೆ ಮಾಡಿದ್ದರೂ ಕೂಡ ಅವರನ್ನು ಪೊಲೀಸರ 122 ಹೊಯ್ಸಳ ವಾಹನದಲ್ಲಿ ಎಲ್ಲಾ ಸೌಕರ್ಯಗಳನ್ನು ಕೊಟ್ಟು ಯಾವುದೇ ತಪ್ಪು ಮಾಡಿಲ್ಲ ಎಂಬಂತೆ ಕರೆದುಕೊಂಡು ಹೋಗಿದ್ದಾರೆ.

ಪೊಲೀಸರು ಇಂಥ ಕೆಲಸ ಮಾಡಿದ್ದರೂ ಕೂಡ ಹೇಗೆ ಇಂಥ ಕೆಲಸವನ್ನು ಪೊಲೀಸ್ ಇಲಾಖೆಯವರೇ ಮುಚ್ಚಿಡುವ ಮುಖೇನ ಬೆಂಬಲಿಸುತ್ತಿದ್ದಾರೆ? ಅವರನ್ನು ರಕ್ಷಿಸುತ್ತಿದ್ದಾರೆ? ಎಂದು ಸುನೀಲ್ ಪ್ರಶ್ನಿಸಿದ್ದಾರೆ.


ತಮ್ಮ ಕಾರಿನಲ್ಲಿ ಅಪಘಾತ ಮಾಡಿದ್ದು ತಿಳಿಯಬಾರದು ಎಂದು, ರಾತ್ರೋ ರಾತ್ರಿ ಕಾರನ್ನು ಸ್ಥಳದಿಂದ ಬದಲಾಯಿಸಿ, ರಸ್ತೆಯ ಬದಿಯಲ್ಲಿರುವ ಯಾವುದೋ ಗುಂಡಿಗೆ ನೂಕಿ ತಮ್ಮ ತಪ್ಪನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ! ಚಿಕ್ಕಮಗಳೂರು ಪೊಲೀಸರು ಯಾವುದೇ ರೀತಿಯಲ್ಲೂ ಕ್ರಮಕೈಗೊಂಡಿಲ್ಲ!

ನಮಗೆ ಬಣಕಲ್ ಪೊಲೀಸ್ ಠಾಣೆಯ ಪೊಲೀಸರು ಸಹಕರಿಸುತ್ತಿಲ್ಲ, ಎಫ್.ಐ.ಆರ್ ದಾಖಲು ಮಾಡಿ ಎಂದು ಕೇಳಿದ್ರೆ, ಅದಕ್ಕೆ ಸ್ಪಷ್ಟ ಉತ್ತರವಿಲ್ಲ. ಬೆಂಬಿಡದೆ ಕೇಳಿದ್ದಕ್ಕೆ ಎಫ್.ಐ.ಆರ್ ದಾಖಲಿಸಿಕೊಂಡಿದ್ದೇವೆ, ಅವರನ್ನು ಮಹಜರು ಮಾಡಲು ಮುಂದಾಗಿದ್ದೇವೆ ಎಂದು ಹೇಳುತ್ತಿದ್ದಾರೆಯೇ ವಿನಃ ನಮಗೆ ಎಫ್.ಐ.ಆರ್ ಪ್ರತಿ ತೋರಿಸಿ ಅಂದ್ರೆ, ತೋರಿಸದೇ ಕೇವಲ ಹೇಳಿಕೆಗಳ ಸರಮಾಲೆಯನ್ನು ಕಟ್ಟುತ್ತಿದ್ದಾರೆ ಎಂದು ಸುನೀಲ್ ಆರೋಪಿಸಿದ್ದಾರೆ.


ನಿರಂತರ ಒತ್ತಾಯದ ಬಳಿಕ ಪೊಲೀಸರ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ಪ್ರತಿಯನ್ನು ನೊಂದವರಿಗೆ ನೀಡಿದ್ದಾರೆ. ಆದ್ರೆ ಅದರಲ್ಲಿ ಹಲ್ಲೆ, ಶಾಂತಿಗೆ ಭಂಗ ಇಂಥಾ ಸಣ್ಣಪುಟ್ಟ ಪ್ರಕರಣ ದಾಖಲಿಸಿ ಪೊಲೀಸ್‌ ಸಿಬ್ಬಂದಿಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ ಅನ್ನೋದು ದೂರದಾರರ ಆರೋಪ.

ಒಟ್ಟಿನಲ್ಲಿ ಹಲ್ಲೆ ಮಾಡಿದ ಮೂವರು ಪೊಲೀಸರನ್ನು ಅಮಾನತುಗೊಳಿಸಿ ಕಾನೂನು ಕಾಪಾಡುತ್ತಾರೋ? ಅಥವಾ ತಪ್ಪನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಾರೋ? ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ!
Exit mobile version