ಸೂರ್ಯನ ಸುತ್ತ ವೃತ್ತ: ಆಕರ್ಷಕ ವಿದ್ಯಮಾನಕ್ಕೆ ಕಾರಣ ಏನು ಗೊತ್ತಾ?

ಬೆಂಗಳೂರು, ಮೆ. 24: ಪ್ರಕೃತಿಯಲ್ಲಿ ಒಂದಿಲ್ಲೊಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ.‌ ಈ ರೀತಿ ಪ್ರಕೃತಿಯಲ್ಲಿ ನಡೆಯುವ ಕೆಲವೊಂದು ಅಪರೂಪದ ವಿದ್ಯಮಾನಗಳ ವಿಶೇಷತೆ ಮತ್ತು ಆಕರ್ಷಣೆ ನಿಜಕ್ಕೂ ಕೌತುಕವಾಗಿರುತ್ತದೆ.

ಅಂತಹ ಒಂದು ಅಪರೂಪದ ವಿದ್ಯಮಾನ ಸೋಮವಾರ ಬಾನಂಗಳದಲ್ಲಿ ಕಂಡುಬಂತು. ದೇಶದ ಹಲವೆಡೆಗಳಲ್ಲಿ ಬರಿಗಣ್ಣಿಗೆ ಕಾಣಿಸಿದ ಈ‌ ಕೌತುಕ ಎಲ್ಲರನ್ನ ಆಕರ್ಷಿಸಿತು. ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆವರೆಗೆ ಆಗಸದಲ್ಲಿ ಸೂರ್ಯನ ಸುತ್ತಲೂ ವೃತ್ತಾಕಾರದಲ್ಲಿ ಕಾಣಿಸಿದ ಈ ವಿಸ್ಮಯಕಾರಿ ದೃಶ್ಯಕ್ಕೆ ಎಲ್ಲರೂ ಮನಸೋತರು.

ಸೂರ್ಯನ ಸಮೀಪದಲ್ಲಿ ಕಾಣಿಸಿಕೊಂಡ ಈ ವಿಸ್ಮಯಕ್ಕೆ ʻSUN HALOʼ ಎನ್ನಲಾಗುತ್ತದೆ. ವಾತಾವರಣದಲ್ಲಿನ ತೆಳುವಾದ ಮಂಜಿನ ಬಿಂದುಗಳಿಂದ ಇದು ಸೃಷ್ಟಿಯಾಗುತ್ತದೆ. ಹವಾಮಾನ ತಜ್ಞರು ಯಾವಾಗ ಮಳೆ ಬರಬಹುದು ಎಂದು ಊಹಿಸಲು ಈ SUN HALO ಸಹಾಯ ಮಾಡುತ್ತದೆಯಂತೆ.

ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಿಸಿದೆ. ವಾತಾವರಣದ ತೇವಾಂಶ ಹೆಚ್ಚು ಇರುವ ಮತ್ತು ಮಳೆಯ ಮುನ್ಸೂಚನೆಯನ್ನು ಇದು ನೀಡುತ್ತದೆ. ಮೋಡದಲ್ಲಿನ ಮಂಜುಗಡ್ಡೆ ಹರಳುಗಳು ಸೂರ್ಯನಿಗೆ 22 ಡಿಗ್ರಿ ಅಥವಾ ಹೆಚ್ಚಿನ ಕೋನದಲ್ಲಿ ವಕ್ರೀಭವನಕ್ಕೀಡಾಗುತ್ತವೆ. ಸೂರ್ಯನ ಸುತ್ತ ವೃತ್ತಾಕಾರವಾಗಿ ಹರಡಿಕೊಳ್ಳುತ್ತವೆ. ಈ ಹರಳುಗಳ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ, ಕಿರಣವು ಕಾಮನಬಿಲ್ಲಿನ ಏಳು ಬಣ್ಣಗಳಾಗಿ ಚದುರಿ, ಆಕರ್ಷಕ ಕಾಮನಬಿಲ್ಲು ಗೋಚರಿಸುತ್ತದೆ.

Exit mobile version