ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣ 11,400 ಕೋಟಿ ಕೊಡಲು ಒಪ್ಪಿಗೆ: ಸಿಎಂ ಬಸವರಾಜ್‌ ಬೊಮ್ಮಾಯಿ

ನವದೆಹಲಿ, ಜು. 31: ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದ 2ನೇ ದಿನವಾದ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಸಿಎಂ,  ಜಿಎಸ್ ಟಿ ಪರಿಹಾರ ಬಾಕಿ ಹಣ 11,400 ಕೋಟಿ ಕೊಡಲು ನಿರ್ಮಲಾ ಸೀತಾರಾಮನ್ ಒಪ್ಪಿದ್ದಾರೆ. ಪ್ರತಿತಿಂಗಳು ಕಂತಿನ ರೂಪದಲ್ಲಿ ಕೊಡಲಿದ್ದಾರೆ. 8 ಸಾವಿರ ಕೋಟಿ ಈ ಸಾಲಿನ ಜಿಎಸ್ ಟಿ ಹಣ ಕೊಡಲು ಒಪ್ಪಿದ್ದಾರೆ. ನಬಾರ್ಡ್ ಹಣದಿಂದ ಅನುದಾನ ಕೊಡಲಿದ್ದಾರೆ ಎಂದು ತಿಳಿಸಿದರು.

ಜೊತೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವ್ಯ ಭೇಟಿಯಾದ ಸಿಎಂ ಬಳಿಕ ಮಾತನಾಡಿದರು. ಪ್ರತಿ ತಿಂಗಳು 63 ರಿಂದ 64 ಲಕ್ಷ ಡೋಸ್​​ ಲಸಿಕೆ ಕೊಡುತ್ತಿದ್ದಾರೆ. ಮುಂದಿನ ತಿಂಗಳು 1 ಕೋಟಿ ಕೊಡಲು ಒಪ್ಪಿದ್ದಾರೆ. ಕೊರೊನಾ 3ನೇ ಅಲೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇನೆ, ಅದಕ್ಕಾಗಿ 800 ಕೋಟಿ ರೂ. ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

ಇನ್ನು ಮೇಕೆದಾಟು ವಿಚಾರವಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾ ಮಲೈ ಉಪವಾಸ ಕೂರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ಏನಾದರೂ ಮಾಡಿಕೊಳ್ಳಲಿ. ಊಟನಾದರೂ ಮಾಡಲಿ, ಉಪವಾಸವನ್ನಾದರೂ ಮಾಡಲಿ, ಮೇಕೆದಾಟು ನಮ್ಮ ಹಕ್ಕು. ನಮ್ಮ ಯೋಜನೆಯನ್ನು ನಾವು ಮಾಡುತ್ತೇವೆ. ಅವರು ಏನು ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಗಳ ಹಿನ್ನಲೆಯಲ್ಲಿ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಆದ್ಯತೆ ಮೇರೆಗೆ ರಕ್ಷಣೆ, ಪರಿಹಾರ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಸಂತ್ರಸ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Exit mobile version