ನಕ್ಸಲರಿಂದ ಅಪಹರಣವಾದ ಕಮಾಂಡೊ ರಾಕೇಶ್ವರ್ ಸಿಂಗ್ ಚಿತ್ರ ಬಿಡುಗಡೆ; ಮಾತುಕತೆಗೆ ಮಧ್ಯವರ್ತಿ ನೇಮಕಕ್ಕೆ ಒತ್ತಾಯ

ರಾಯಪುರ, ಏ. 07: ಸಿಆರ್​ಪಿಎಫ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ಸೆರೆಸಿಕ್ಕಿರಬಹುದು ಎನ್ನಲಾದ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ (Central Reserve Police Force – CRPF) ಕೋಬ್ರಾ ತುಕಡಿಯ ಯೋಧ ರಾಕೇಶ್ವರ್​ ಸಿಂಗ್ ಅವರ ಚಿತ್ರವನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ. ಮಾವೋವಾದಿ ನಾಯಕನ ವಾಟ್ಸಾಪ್​ ಸಂಖ್ಯೆಯಿಂದ ಅಪಹೃತ ಯೋಧನ ಚಿತ್ರ ಬಿಡುಗಡೆಯಾಗಿದೆ ಎಂದು ಸುಕ್ಮ ಮತ್ತು ಬಿಜಾಪುರದ ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಅಪಹೃತ ಯೋಧನ ಬಿಡುಗಡೆಗಾಗಿ ಮಾತುಕತೆ ನಡೆಸಬಲ್ಲ ಮಧ್ಯವರ್ತಿಗಳನ್ನು ಗುರುತಿಸುವಂತೆ ಪತ್ರಿಕಾ ಹೇಳಿಕೆಯ ಮೂಲಕ ನಕ್ಸಲರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.

ಕಳೆದ ಶನಿವಾರ ಸಿಆರ್​ಪಿಎಫ್​ನ ಕೋಬ್ರಾ ಘಟಕ, ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆಯ ಸಿಬ್ಬಂದಿಯ ಮೇಲೆ ನಕ್ಸಲರು ಹೊಂಚುದಾಳಿ ನಡೆಸಿದ್ದರು. ಈ ವೇಳೆ ಸುಮಾರು ಐದು ತಾಸು ಗುಂಡಿನ ಚಕಮಕಿ ನಡೆದಿತ್ತು. ಭದ್ರತಾಪಡೆಗಳಿಗೆ ಸೇರಿದ 22 ಮಂದಿ ಹುತಾತ್ಮರಾಗಿದ್ದರು. ಈ ವೇಳೆ ಸುಮಾರು 20 ಮಾವೋವಾದಿಗಳನ್ನು ಕೊಲ್ಲಲಾಗಿದೆ ಎಂದು ಭದ್ರತಾ ಪಡೆಗಳ ಸಿಬ್ಬಂದಿ ಹೇಳಿದ್ದರು. ಆದರೆ ಈ ಹೇಳಿಕೆಯನ್ನು ನಿರಾಕರಿಸಿದ್ದ ನಕ್ಸಲರು ತಮ್ಮ ಪಾಳಯದಲ್ಲಿ ಕೇವಲ ನಾಲ್ವರು ಸತ್ತಿದ್ದಾರೆ ಎಂದು ಹೇಳಿದ್ದರು.

ಶೂಟ್​ಔಟ್​ ವೇಳೆ ಸಿಆರ್​ಪಿಎಫ್​ ತುಕಡಿಯಲ್ಲಿದ್ದ ಜಮ್ಮು ಮೂಲದ ರಾಕೇಶ್ವರ್ ಸಿಂಗ್ ಮಾನ್ಹಸ್ ನಾಪತ್ತೆಯಾಗಿದ್ದರು. ಅವರನ್ನು ನಕ್ಸಲರು ಅಪಹರಿಸಿರಬಹುದು ಎಂದು ಶಂಕಿಸಲಾಗಿತ್ತು. ನಾಪತ್ತೆಯಾಗಿದ್ದ ಯೋಧನ ಚಿತ್ರವು ಇಂದು ಮುಂಜಾನೆ 11.27ಕ್ಕೆ ಸ್ಥಳೀಯ ಪತ್ರಕರ್ತರಿಗೆ ಸಿಕ್ಕಿದೆ. ಮಾವೋವಾದಿಗಳ ನಾಯಕ ವಿಕಲ್ಪ ಈ ಫೋಟೊ ಕಳಿಸಿದ್ದಾರೆ ಎಂದು ಸುಕ್ಮದ ಪತ್ರಕರ್ತ ರಾಜಾ ರಾಥೋಡ್ ತಿಳಿಸಿದ್ದಾರೆ.

ನಕ್ಸಲರು ಮಂಗಳವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ‘ಅಪಹೃತ ಸಿಆರ್​ಪಿಎಫ್ ಯೋಧನ ಬಿಡುಗಡೆಗಾಗಿ ಮಾತುಕತೆಗಾಗಿ ಮಧ್ಯವರ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ’ ಎಂದು ಹೇಳಿದೆ.

Exit mobile version