ತಮಿಳುನಾಡಿನಲ್ಲಿಯೂ 2 ವಾರಗಳ ಕಾಲ ಸಂಪೂರ್ಣ ಲಾಕ್ಡೌನ್

ಚೆನ್ನೈ, ಮೇ. 08: ಕೊರೋನಾ ಅಬ್ಬರವನ್ನು ನಿಯಂತ್ರಿಸಲು ಕರ್ನಾಟಕದಲ್ಲಿ ಸೋಮವಾರದಿಂದ ಮೇ 24ರವರೆಗೆ 2 ವಾರಗಳ ಲಾಕ್​ಡೌನ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿಯೂ ಮೇ 10ರಿಂದ 24ರವರೆಗೆ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ತಮಿಳುನಾಡಿನಲ್ಲಿ ಕೊರೋನಾ ಕೇಸುಗಳು ಮಿತಿ ಮೀರುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಣೆ ಮಾಡಿದ್ದಾರೆ.

ಮೇ 10ರಿಂದ 24ರವರೆಗೆ ತಮಿಳುನಾಡಿನಲ್ಲಿ ತರಕಾರಿ ಅಂಗಡಿ, ಮಾಂಸದಂಗಡಿ, ಮೀನಿನ ಅಂಗಡಿ, ದಿನಸಿ ಅಂಗಡಿಗಳು ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರುತ್ತವೆ. ಉಳಿದಂತೆ ಎಲ್ಲ ಅಂಗಡಿಗಳು ಬಂದ್ ಆಗಿರಲಿವೆ. ತಮಿಳುನಾಡಿನಲ್ಲಿ ಬಾರ್, ಲಿಕ್ಕರ್ ಶಾಪ್​ಗಳು ಕೂಡ 14 ದಿನಗಳ ಕಾಲ ಬಂದ್ ಆಗಲಿವೆ. ರೆಸ್ಟೋರೆಂಟ್​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 14 ದಿನಗಳ ಲಾಕ್​ಡೌನ್​ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗುವುದು.

ನೆರೆಯ ರಾಜ್ಯವಾದ ಕೇರಳದಲ್ಲೂ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ನಿನ್ನೆ ಕರ್ನಾಟಕದಲ್ಲೂ ಲಾಕ್​ಡೌನ್ ಘೋಷಣೆ ಮಾಡಲಾಗಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ ರಾಜ್ಯಾದ್ಯಂತ ಜಾರಿಯಲ್ಲಿ ಇರಲಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಬಾರ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯಲ್ಲಿ ತರಕಾರಿ-ಹಣ್ಣುಗಳನ್ನು ಮಾರಲು ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಬಾರ್​ಗಳಲ್ಲಿ ಪಾರ್ಸಲ್​ಗೆ ಅವಕಾಶ ನೀಡಲಾಗಿದೆ. ಹೋಟೆಲ್​ ​, ರೆಸ್ಟೋರೆಂಟ್​​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅನುಮತಿ ನೀಡಲಾಗಿದೆ. ಆಸ್ಪತ್ರೆಗಳು, ಮೆಡಿಕಲ್​ ಶಾಪ್​ಗಳು, ಬ್ಯಾಂಕ್​ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಹೋಟೆಲ್​​ನಿಂದ ಪಾರ್ಸಲ್​​ ಅಥವಾ ತರಕಾರಿ ತರಲು ವಾಹನ ತೆಗೆದುಕೊಂಡು ಹೋಗುವಂತಿಲ್ಲ. ಅಕ್ಕಪಕ್ಕದ ಅಂಗಡಿಗಳಲ್ಲೇ‌ ಖರೀದಿ ಮಾಡಬೇಕು. ಏರ್‌ಪೋರ್ಟ್, ರೈಲ್ವೇ ನಿಲ್ದಾಣಕ್ಕೆ‌ ಮಾತ್ರ ವಾಹನ ಬಳಕೆ ಮಾಡಬಹುದು ಎಂದು ಕರ್ನಾಟಕದಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಇಂದು ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಪಕ್ಕದ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಿದ್ದರಿಂದ ತಮಿಳುನಾಡಿನಲ್ಲೂ ಲಾಕ್​ಡೌನ್ ಘೋಷಣೆ ಮಾಡಲಾಗಿದೆ.

Exit mobile version