ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಮತದ ಯಂತ್ರದಂತೆ ಬಳಸಿದೆ – ಹೆಚ್.ಡಿ. ಕುಮಾರಸ್ವಾಮಿ

 ಬೆಂಗಳೂರು ಅ 4 : ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಮತದ ಯಂತ್ರದಂತೆ ಬಳಸಿಕೊಂಡಿತು. ರಾಜಕೀಯ ಸ್ವಾರ್ಥಕ್ಕಾಗಿ ಅಲ್ಪಸಂಖ್ಯಾತರ ಹಿತವನ್ನು ಬಲಿ ಕೊಟ್ಟಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಐದನೇ ದಿನದ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಗಾರದಲ್ಲಿ ಎಲ್ಲಾ ಜಿಲ್ಲೆಗಳ ಮುಸ್ಲಿಂ ಸಮುದಾಯದ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ವೋಟಿನ ಯಂತ್ರದಂತೆ ಬಳಸಿಕೊಂಡಿತು. ರಾಜಕೀಯ ಸ್ವಾರ್ಥಕ್ಕಾಗಿ ಅಲ್ಪಸಂಖ್ಯಾತರ ಹಿತವನ್ನು ಬಲಿ ಕೊಟ್ಟಿತು ಎಂದು ಕಿಡಿ ಕಾರಿದ್ದಾರೆ.

ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಮುಸ್ಲಿಮರನ್ನು ರಾಜಕೀಯವಾಗಿ ಬಳಸಿಕೊಂಡು ಶೋಷಣೆ ಮಾಡುತ್ತಿದೆ. ದೇಶದಲ್ಲಿರುವ 19% ಜನರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಕೆಲಸ ಈಗ ನಡೆಯುತ್ತಿದೆ. ನಾವೆಲ್ಲರೂ ಒಂದು ಎಂದು ಸಂವಿಧಾನ ಹೇಳಿದರೂ ಬಿಜೆಪಿ ತನ್ನ ಹಿಡನ್ ಅಜೆಂಡಾ ಜಾರಿ ಮಾಡುತ್ತಿದೆ. ನಿಮ್ಮನ್ನು ಸದಾ ಅನುಮಾನದಿಂದ ನೋಡುತ್ತಿದೆ. ಇದನ್ನು ನೋಡುತ್ತಾ ಕಾಂಗ್ರೆಸ್ ಜಾಣ ಮೌನದಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ.

ರಾಜೀವ್ ಗಾಂಧಿ ಅಯೋಧ್ಯೆಯಲ್ಲಿ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ನೀಡಿದರು. ಪಿವಿ ನರಸಿಂಹ ರಾವ್ ಇದ್ದಾಗ ಬಾಬರಿ ಮಸೀದಿ ಒಡೆಯಲು ಅವಕಾಶ ಕೊಟ್ಟರು. ಮಸೀದಿಯನ್ನು ಕೆಡವುತ್ತಾರೆ ಎಂದು ಗೊತ್ತಿದ್ದರೂ ಅವರ ಸರಕಾರ ರಕ್ಷಣೆ ಕೊಡದೇ ನಿದ್ದೆ ಮಾಡುತ್ತಿತ್ತು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಗೋಧ್ರಾ ಘಟನೆ ನಡೆದಾಗ ಹಿಂಸಾಚಾರಕ್ಕೆ ಬಿಜೆಪಿ ಕುಮ್ಮಕ್ಕು ಕೊಟ್ಟರೆ ಕಾಂಗ್ರೆಸ್ ಸುಮ್ಮನೆ ಇತ್ತು, ಅಂತಹ ವೇಳೆ ದೇವೇಗೌಡರು ಗುಜರಾತ್ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಬಿಜೆಪಿ ಜತೆ ಸರಕಾರ ಮಾಡಲು ದೇವೇಗೌಡರು ಒಪ್ಪಲಿಲ್ಲ. ಆಮೇಲೆ ಇದೇ ಸಿದ್ದರಾಮಯ್ಯ, ಪಿಜಿಆರ್ ಸಿಂಧ್ಯಾ, ಎಂಪಿ ಪ್ರಕಾಶ್ ಅವರು ಐದು ದಿನ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆ ನಡೆಸಿದರು. ಸಿಎಂ. ಪಟ್ಟ ಬಿಟ್ಟು ಕೊಡಲು ಕಾಂಗ್ರೆಸ್ ತಯಾರು ಇರಲಿಲ್ಲ. ಸಿದ್ದರಾಮಯ್ಯ ಮುನಿಸಿಕೊಂಡು ಕರ್ನಾಟಕ ಭವನದಲ್ಲಿ ಮಲಗಿದ್ದರು. ಅವರನ್ನು ನಾನೇ ಸಮಾಧಾನಪಡಿಸಿದೆ. ಆಗ ಎಂಪಿ ಪ್ರಕಾಶ್, ಸಿಂಧ್ಯಾ ಅವರು ಡಿಸಿಎಂ ಆಗಲು ರೆಡಿ ಇದ್ದರು. ಆದರೆ ದೇವೇಗೌಡರಿಗೆ ಸಿದ್ದರಾಮಯ್ಯ ಅವರೇ ಆಗಬೇಕು ಎಂಬುದು ಇತ್ತು ಎಂದಿದ್ದಾರೆ.

ಈ ಹಗ್ಗಜಗ್ಗಾಟ ನಡುವೆ ಧರ್ಮ ಸಿಂಗ್ ಸಿಎಂ ಅದರು. ಆರು ತಿಂಗಳ ಕಾಲ ಸಂಪುಟವೇ ಆಗಲಿಲ್ಲ. ತಲಾ ಆರು ಜನ ಮಂತ್ರಿಗಳಾದರು. ಆಗ ಕಾಂಗ್ರೆಸ್ ನಮ್ಮನ್ನು ಮೂರನೇ ದರ್ಜೆ ಪ್ರಜೆಗಳಂತೆ ನೋಡಿತು.ಈಗ ಮುಸ್ಲಿಮರನ್ನು ಕಾಂಗ್ರೆಸ್ ಹಾಗೆ ನೋಡುತ್ತಿದೆ. ಕಳೆದ ೭೦ ವರ್ಷಗಳಿಂದ ಇದೇ ಆಗಿದೆ ಎಂದಿದ್ದಾರೆ.

ಸಿದ್ದರಾಮಯ್ಯ ನಮ್ಮ ಪಕ್ಷದಿಂದ ದೂರ ಆಗತೊಡಗುತ್ತಿದ್ದಂತೆ ಯಡಿಯೂರಪ್ಪ ಬಂದರು. ಜಸ್ಟ್ ಮಂತ್ರಿ ಮಾಡಿ. ಬಿಜೆಪಿ ಬಿಟ್ಟು ಬರುತ್ತೇನೆ ಎಂದರು. ಒಬ್ಬ ಗನ್ ಮ್ಯಾನ್ ಜತೆ ಚೀಟಿ ಕಳಿಸಿದರು. ಆದರೆ ನಾನು ಅವರಿಗೆ ಬುದ್ಧಿ ಹೇಳಿದೆ. ಬಿಜೆಪಿ ಬಿಟ್ಟರೆ ಕೆಡ್ತಿರಿ ಎಂದೆ. ಅದೇ ನಾನು ಮಾಡಿದ ತಪು. ಆವತ್ತು ಅವರಿಗೆ ಬಿಜೆಪಿ ಬಿಡಲು ಹೇಳಿದ್ದರೆ ಆ ಪಕ್ಷ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Exit mobile version