ಸಾಹಿತಿಗಳಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲ: ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಫೆ. 05: ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅವರಿಗೆ ಮಸಿ ಬಳಿದ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯಿಲ್ಲದಂತಾಗಿದ್ದು, ಸಾಹಿತಿಗಳಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪನಾ ಅವರನ್ನ ಠಾಣೆಗೆ ಕರೆದು ವಿಚಾರಿಸಿದ್ದಾರೆ. ಅವರೇನು ಕಾನೂನಿಗೆ ವಿರುದ್ಧ ಮಾತನಾಡಿರಲಿಲ್ಲ. ಇದೀಗ ಭಗವಾನ್ ಅವರಿಗೆ ಮಸಿ ಬಳಿಯಲಾಗಿದೆ, ಮೀರಾ ರಾಘವೇಂದ್ರ ಎಂಬುವರು ಕೇಸ್ ಹಾಕಿದ್ದಾರೆ. ರಾಮನ ಬಗ್ಗೆ ಮಾತನಾಡಿದ್ದಾರೆಂದು ಭಗವಾನ್ ಅವರ ಮೇಲೆ ಕೇಸ್ ಹಾಕಿದ್ದಾರೆ.
ಅದಕ್ಕೆ ಜಾಮೀನು ಕೂಡ ಸಿಕ್ಕಿದೆ. ಆದರೆ ಅವರು ಹೊರಗಡೆ ಬಂದ ಮೇಲೆ ಮಸಿ ಬಳಿದಿದ್ದಾರೆ. ಮಸಿ ಬಳಿದಿದ್ದು ತೀರ್ವ ಖಂಡನೀಯ ಎಂದರು.

ಹಿರಿಯ ಸಾಹಿತಿಗೆ ಕೋರ್ಟ್ ಆವರಣದಲ್ಲೇ ಮಸಿ ಬಳಿಯುತ್ತಾರೆ ಎಂದರೆ, ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯಿಲ್ಲ ಎಂಬಂತಾಗಿದೆ. ಘಟನೆ ಖಂಡನೀಯವಾಗಿದ್ದು ಮೀರಾ ರಾಘವೇಂದ್ರ ಮೇಲೆ ಕ್ರಮಜರುಗಿಸಬೇಕು, ಹೆಣ್ಣುಮಗಳೇ ಆಗಿದ್ದರೂ ಕ್ರಮಜರುಗಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಈ ನಡುವೆ ಘಟನೆ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ಭಗವಾನ್ ಅವರಿಗೆ ಮಸಿ ಬಳದಿರೋದು ಸರಿಯಲ್ಲ. ಆದರೆ ಭಗವಾನ್ ದೇವರ ವಿಚಾರದಲ್ಲಿ ಮಾತಾಡಿರೋದು ಸಹಿಸುವಂತಹದಲ್ಲ. ಭಗವಾನ್ ಪುಣ್ಯಕ್ಕೆ ಭಾರತದಲ್ಲಿ ಹುಟ್ಟಿದ್ದಾರೆ. ಅದೇ ಪಾಕಿಸ್ತಾನದಲ್ಲಿದ್ರೆ ತಲೆಯೆ ತೆಗೆದುಹಾಕುತ್ತಿದ್ದರು. ಭಗವಾನ್ ಹೇಳಿಕೆಯನ್ನ ಅವರನ್ನು ಹುಟ್ಟಿಸಿರೋ ತಂದೆತಾಯಿನೂ ಒಪ್ಪೋದಿಲ್ಲ, ಇವರು ಹುಟ್ಟಿಸಿರೋ ಮಕ್ಕಳು ಒಪ್ಪೋದಿಲ್ಲ ಎಂದು ಟೀಕಿಸಿದ್ದಾರೆ.

Exit mobile version