ಕಾಂಗ್ರೆಸ್‌ನ ಕುಟುಂಬ ರಾಜಕಾರಣ ಕಾರ್ಯಕರ್ತರಿಂದ ಅಸಮಾಧಾನ

ವಿಧಾನ ಪರಿಷತ್‌ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್‌ನಲ್ಲಿ ಉದ್ಬವಿಸಿರುವ ಕುಟುಂಬ ರಾಜಕಾರಣದ ಕುರಿತು ಕಾಂಗ್ರೆಸ್‌ ಕಾರ್ಯಕರ್ತರು ಅಸಮಧಾನ ಹೊರಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೋದರ ಸಂಬಂಧಿ ಎಸ್‌. ರವಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪರಿಷತ್ ಟಿಕೆಟ್ ನೀಡಲಾಗಿದೆ. ಇತ್ತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರ ಚನ್ನರಾಜ್ ಹಟ್ಟಿಹೊಳಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಅಲ್ಲದೇ ಶಾಸಕ ರಾಜಶೇಖರ್ ಹುಮ್ನಾಬಾದ್ ಸಹೋದರ ಭೀಮರಾವ್ ಪಾಟೀಲ್‌ಗೆ ಬೀದರ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಇನ್ನು ಮಾಜಿ ಸಚಿವ ಎಂ.ಬಿ. ಪಾಟೀಲ್ ಸಹೋದರ ಸುನೀಲ್ ಗೌಡ ಪಾಟೀಲ್‌ಗೆ ವಿಜಯಪು-ಬಾಗಲಕೋಟೆ, ರಾಯಚೂರು-ಕೊಪ್ಪಳ ಕ್ಷೇತ್ರದಿಂದ ಶಾಸಕ ಅಮರೇಗೌಡ ಬಯ್ಯಾಪುರ ಅಣ್ಣನ ಮಗ ಶರಣೇಗೌಡ ಬಯ್ಯಾಪುರಗೆ ಟಿಕೆಟ್ ನೀಡಲಾಗಿದೆ.

ಈ ಎಲ್ಲಾ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿರೋದು ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಳ್ಳೋಕೆ ಕಾರಣವಾಗಿದೆ. ಹೀಗಾಗಿ ನೇರವಾಗಿ ತಮ್ಮ ಪಕ್ಷದ ನಾಯಕರ ವಿರುದ್ಧವೇ ಕಿಡಿ ಕಾರುತ್ತಿದ್ದಾರೆ. ಈ ಅಸಮಾಧಾನದ ಬೆಂಕಿ ಕೈ ಹೈಕಮಾಂಡ್‌ವರೆಗೂ ತಲುಪಿದೆ.

ಕುಟುಂಬಸ್ಥರಿಗೆ ವಿಧಾನ ಪರಿಷತ್ ಟಿಕೆಟ್ ಕೊಟ್ಟಿದ್ದಕ್ಕೆ ಪಕ್ಷದ ನಾಯಕರ ವಿರುದ್ಧ ಕೈಪಡೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬಹಿರಂಗವಾಗಿಯೇ ಪ್ರಭಾಕರ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ, NSUI ಮಾಜಿ ಅಧ್ಯಕ್ಷರಾಗಿರೋ ಪ್ರಭಾಕರ ರೆಡ್ಡಿ ಪಕ್ಷದ ವರಿಷ್ಠರು, ರಾಜ್ಯ ನಾಯಕರಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಕುಟುಂಬ ರಾಜಕೀಯ ಪಕ್ಷದ ಪಡಸಾಲೆಯಲ್ಲೇ ಚರ್ಚೆಗೆ ಗ್ರಾಸವಾಗಿದೆ.
ಇಷ್ಟು ದಿನ ಜೆಡಿಎಸ್‌ ವಿರುದ್ಧ ಕುಟುಂಬ ರಾಜಕೀಯದ ಆರೋಪ ಆಗಾಗ ಕೇಳಿ ಬರ್ತಿತ್ತು. ಇದೀಗ ಕಾಂಗ್ರೆಸ್‌ನಲ್ಲಿ ಸ್ವಜನಪಕ್ಷಪಾತದ ವಿರುದ್ದ ಕಾರ್ಯಕರ್ತರು ಅಸಮಧಾನ ವ್ಯೆಕ್ತಪಡಿಸಿದ್ದಾರೆ.

Exit mobile version