‘ಅಧಿಕಾರದಲ್ಲಿ ಇರಲಿಲ್ಲ, ಅಧಿಕಾರಕ್ಕೆ ಬರಲಿಲ್ಲ” – ಸಿದ್ದು ಉವಾಚ!

siddaramaiah

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಸೋಲಿನೊಂದಿಗೆ ಸೋರಗಿದೆ. ಗೋವಾದಲ್ಲಿ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಕಾಂಗ್ರೆಸ್‍ಗೆ ಮತದಾರರು ಶಾಕ್ ನೀಡಿದ್ದಾರೆ. ಇನ್ನೊಂದೆಡೆ ಪಂಜಾಬ್‍ನಲ್ಲಿ ಪಕ್ಷದ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ಮುಖ್ಯಮಂತ್ರಿಯಾಗಿದ್ದ ಚರಣ್‍ಜಿತ್ ಸಿಂಗ್ ಚೆನ್ನಿ ಮತ್ತು ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೋತಿದ್ದು, ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗುವಂತೆ ಮಾಡಿದೆ.

ಇನ್ನೊಂದೆಡೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹೆಸರೇ ಇಲ್ಲದಂತೆ ಮಾಯವಾಗಿದ್ದರೆ, ಮಣಿಪುರ ಮತ್ತು ಉತ್ತರಾಖಂಡದಲ್ಲಿಯೂ ಅಧಿಕಾರಕ್ಕೇರುವಲ್ಲಿ ಎಡವಿದೆ. ಹೀಗೆ ಪಂಚರಾಜ್ಯಗಳಲ್ಲಿಯೂ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, “ಪಂಚರಾಜ್ಯಗಳ ಪೈಕಿ ನಾವು ಅಧಿಕಾರದಲ್ಲಿ ಇದ್ದಿದ್ದು ಪಂಜಾಬ್‍ನಲ್ಲಿ ಮಾತ್ರ. ಇನ್ನು ಗೋವಾದಲ್ಲಿ ಅಧಿಕಾರಕ್ಕೇರುವ ಆಸೆ ಇಟ್ಟುಕೊಂಡಿದ್ದೇವು.

ಉಳಿದ ಮೂರು ರಾಜ್ಯಗಳಲ್ಲಿ ನಾವು ಅಧಿಕಾರಕ್ಕೇರುವ ಯಾವ ಸಾಹಸವನ್ನು ಮಾಡಿಲ್ಲ. ಯಾಕೆಂದರೆ, ನಾವು ಆ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಹೀಗಾಗಿ ನಾವು ಕಳೆದುಕೊಂಡಿದ್ದು, ಪಂಜಾಬ್ ಅನ್ನು ಮಾತ್ರ” ಎಂದಿದ್ದಾರೆ. ಇನ್ನು ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ಈ ವಿಶ್ಲೇಷಣೆ ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ಪ್ರತಿಬಿಂಬಿಸುವಂತಿದೆ. ಹೊಸ ರಾಜ್ಯ ಗೆಲ್ಲುವ ಯಾವ ಶಕ್ತಿಯೂ ನಮ್ಮ ಪಕ್ಷಕ್ಕಿಲ್ಲ. ಹೀಗಾಗಿ ಈಗಿರುವ ರಾಜ್ಯಗಳನ್ನು ಉಳಿಸಿಕೊಳ್ಳುವುದೇ ನಮಗೆ ಮುಖ್ಯ. ಬಿಜೆಪಿಯೊಂದಿಗೆ ಸೆಣಸಾಟ ನಡೆಸಿ, ಮತದಾರರ ಮನಗೆದ್ದು, ಅಧಿಕಾರ ಹಿಡಿಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುವುದಿಲ್ಲ ಎಂಬ ಸಂದೇಶವನ್ನು ತಮ್ಮ ಈ ವಿಶ್ಲೇಷಣೆಯ ಮೂಲಕ ಪರೋಕ್ಷವಾಗಿ ಹೇಳಿದ್ದಾರೆ ಸಿದ್ದರಾಮಯ್ಯ.

“ನಾಲ್ಕು ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿ ಇರಲಿಲ್ಲ, ಹೀಗಾಗಿ ನಾವು ಮತ್ತೇ ಅಧಿಕಾರಕ್ಕೆ ಬರಲಿಲ್ಲ” ಎಂಬ ಸಿದ್ದರಾಮಯ್ಯನವರ ವಿಶ್ಲೇಷಣೆ ನಿಜಕ್ಕೂ ಕಾಂಗ್ರೆಸ್‍ನ್ನು ಮತ್ತಷ್ಟು ಕುಗ್ಗಿಸಲಿದೆ. ಇನ್ನು ಗೋವಾದಲ್ಲಿ ಕಾಂಗ್ರೆಸ್ ವೀಕ್ಷಕರಾಗಿ ತೆರಳಿದ್ದ ಸತೀಶ್ ಜಾರಕಿಹೊಳಿ ಮಾದ್ಯಮಗಳೊಂದಿಗೆ ಮಾತನಾಡಿ, “ಕಾಂಗ್ರೆಸ್ ಪಕ್ಷ ಗೋವಾದಲ್ಲಿಯೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಆದರೆ ಪಕ್ಷೇತರ ಅಥವಾ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರುವ ಶಕ್ತಿಯೂ ಕಾಂಗ್ರೆಸ್‍ಗೆ ಇಲ್ಲ. ಬಿಜೆಪಿ ಮಾತ್ರ ಅಂತಹ ಪ್ರಯತ್ನಗಳನ್ನು ಮಾಡುತ್ತದೆ. ಕಾಂಗ್ರೆಸ್‍ಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅಂತಹ ಶಕ್ತಿ ಈಗ ಉಳಿದಿಲ್ಲ” ಎಂದಿದ್ದಾರೆ.

Exit mobile version