ಕೊತ್ತಂಬರಿಯನ್ನು ‘ರಾಷ್ಟ್ರೀಯ ಮೂಲಿಕೆ’ ಎಂದು ಘೋಷಿಸಿ!

coriander

ಭಾರತೀಯರು ತಮ್ಮ ಅಡುಗೆಯಲ್ಲಿ ಕೊತ್ತಂಬರಿಯನ್ನು(Coriander) ಹೆಚ್ಚಾಗಿ ಬಳಸುತ್ತಾರೆ. ಈ ಕಾರಣದಿಂದಲೇ ಕೊತ್ತಂಬರಿ(Coriander) ಎಂದರೆ ಎಲ್ಲ ಭಾರತೀಯರಿಗೆ ಅಚ್ಚುಮೆಚ್ಚು. ಹೀಗಾಗಿ ನಮ್ಮ ಬಹುತೇಕ ಅಡುಗೆಗಳಲ್ಲಿ ಕೊತ್ತಂಬರಿಗೆ ಮಹತ್ವದ ಸ್ಥಾನವಿದೆ. ಈ ನಿಟ್ಟಿನಲ್ಲಿ ಹೊಸ ಅಭಿಯಾನವೊಂದು ಸಾಮಾಜಿಕ ಜಾಲತಾಣದಲ್ಲಿ(Social Media) ಶುರುವಾಗಿದ್ದು, ಕೊತ್ತಂಬರಿಯನ್ನು ‘ರಾಷ್ಟ್ರೀಯ ಮೂಲಿಕೆ’(National Herb) ಎಂದು ಘೋಷಿಸುವಂತೆ ಆಗ್ರಹ ಹೆಚ್ಚಾಗಿದೆ. ಬಾಣಸಿಗರೊಬ್ಬರು ಕೊತ್ತಂಬರಿಯನ್ನು ರಾಷ್ಟ್ರೀಯ ಮೂಲಿಕೆ ಎಂದು ಘೋಷಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ತಾವು ಸಲ್ಲಿಸಿರುವ ಅರ್ಜಿಯ ವಿವರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ಅರ್ಜಿ ಎಲ್ಲೆಡೆ ವೈರಲ್ ಆಗಿದೆ. ನೆಟ್ಟಿಗರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಅನೇಕರು ‘ಕೊತ್ತಂಬರಿ’ ಎಂದು ಹ್ಯಾಷ್‍ಟ್ಯಾಗ್ ಮಾಡಿ ಟ್ರೆಂಡಿಂಗ್ ಸೃಷ್ಟಿಸುತ್ತಿದ್ದಾರೆ. ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡುತ್ತಿದ್ದಾರೆ. ಇನ್ನು “ಕೊತ್ತಂಬರಿ (Coriander) ಮೇಲೆ ನನಗೆ ಅಪಾರ ಪ್ರೀತಿಯಿದೆ. ಅದರ ಮೇಲಿನ ನನ್ನ ಪ್ರೀತಿ ರಹಸ್ಯವಾಗಿಲ್ಲ. ದನಿಯಾವನ್ನು ‘ರಾಷ್ಟ್ರೀಯ ಮೂಲಿಕೆ’ ಎಂದು ಘೋಷಣೆ ಮಾಡಬೇಕು ಎಂಬ ನನ್ನ ಪೋಸ್ಟ್ ಇಂದು, ರಾಷ್ಟ್ರೀಯ ವಿಷಯವಾಗಿ ಚರ್ಚೆಯಾಗುತ್ತಿದೆ.

ಈ ಚರ್ಚೆಯಲ್ಲಿ ನೀವು ಭಾಗವಹಿಸಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ನೀವು ಸಹ ಅರ್ಜಿಗೆ ಸಹಿ ಮಾಡಿ, ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ” ಎಂದು ಬಾಣಸಿಗ ಬರೆದುಕೊಂಡಿದ್ದಾರೆ. ಸದ್ಯ ಟ್ವೀಟರ್‍ನಲ್ಲಿ ‘ಕೊತ್ತಂಬರಿ ಅಭಿಯಾನ’ ಹೆಚ್ಚು ಸದ್ದು ಮಾಡುತ್ತಿದೆ. ಸುಮಾರು 15000 ಜನರು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಈ ಅಭಿಯಾನದ ಜೊತೆಜೊತೆಗೆ ‘ಕೊತ್ತಂಬರಿ’ ಜೋಕ್‍ಗಳು ಕೂಡಾ ಎಲ್ಲೆಡೆ ಹರಿದಾಡುತ್ತಿವೆ. ನೆಟ್ಟಿಗರು ಕೊತ್ತಂಬರಿಯನ್ನೇ ಇಟ್ಟುಕೊಂಡು ವಿವಿಧ ಹಾಸ್ಯ ಪ್ರಸಂಗಗಳನ್ನು ಸೃಷ್ಟಿಸಿ ಗೇಲಿ ಮಾಡುತ್ತಿದ್ದಾರೆ. “ಕೊತ್ತಂಬರಿಯನ್ನು ‘ರಾಷ್ಟ್ರೀಯ ಮೂಲಿಕೆ’ ಎಂದು ಘೋಷಿಸಿದರೆ, ಅದನ್ನು ತರಲು ಮಧ್ಯರಾತ್ರಿಯೂ ಅವಕಾಶ ಕೊಡಬೇಕು.

ಕೊತ್ತಂಬರಿ ತರಲು ಹೋದವರನ್ನು ಯಾವುದೇ ಕಾರಣಕ್ಕೂ ಪೋಲಿಸರು ಬಂಧಿಸಬಾರದು” ಎಂದು ನೆಟ್ಟಿಗರೊಬ್ಬರು ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳೆದಿದೆ. ಅದೇ ರೀತಿ “ಪ್ರತಿವರ್ಷ ಸರ್ಕಾರ ಕೊತ್ತಂಬರಿಯನ್ನು ಎಲ್ಲೆಡೆ ಹಂಚಿದ ವ್ಯಕ್ತಿಯೊಬ್ಬರಿಗೆ ‘ಕೊತ್ತಂಬರಿ ಮ್ಯಾನ್’ ಎಂದು ಪ್ರಶಸ್ತಿ ನೀಡಬೇಕು. ಆ ಮೂಲಕ ಕೊತ್ತಂಬರಿ ಡಿಸ್ಟ್ರಿಬ್ಯುಟರ್ಸ್‍ಗೆ ಗೌರವ ಸೂಚಿಸಬೇಕೆಂದು” ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗಳು ಎಲ್ಲೆಡೆ ವೈರಲ್ ಆಗುತ್ತಿದೆ.

Exit mobile version