ಕೊರೊನಾ 3ನೇ ಅಲೆಯ ಆತಂಕ ಹಿನ್ನೆಲೆ: ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕಷ್ಟೇ ಅವಕಾಶ

ದಕ್ಷಿಣ ಕನ್ನಡ, ಆ. 05: ರಾಜ್ಯದಲ್ಲಿ ಸದ್ದಿಲ್ಲದೆ ಕೊರೊನಾ ಮೂರನೇ ಅಲೆಯ ಆತಂಕ ಎದುರಾಗಿದ್ದು, ಇದರ ಪರಿಣಾಮ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ನಿಲ್ಲಿಸಲಾಗಿದೆ.

ಮಹಾಮಾರಿ ಕೊರೊನಾ 3ನೇ ಅಲೆ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸ್ಥಳೀಯ ಜಿಲ್ಲಾಡಳಿತದ ಈ ಆದೇಶ ಆಗಸ್ಟ್ 5ರಿಂದ ಆಗಸ್ಟ್ 15ರವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನಲ್ಲಿ ಭಕ್ತಾಧಿಗಳಿಗೆ ಯಾವುದೇ ಸೇವೆ, ಪ್ರಸಾದ, ಅನ್ನಸಂತರ್ಪಣೆ, ವಸತಿ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಲಾಗಿದೆ ಹಾಗೂ ವಾರಾಂತ್ಯದಲ್ಲಿ ದೇವರ ದರ್ಶನವನ್ನೂ ನಿರ್ಬಂಧಿಸಲಾಗಿದ್ದು, ಭಕ್ತರು ಸಹಕರಿಸುವಂತೆ ಡಾ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಆಗುತ್ತಿದ್ದಂತೆ ಧರ್ಮಸ್ಥಳಕ್ಕೆ ಅಪಾರ ಪ್ರಮಾಣದ ಭಕ್ತರು ಭೇಟಿ ನೀಡಿದ್ದರು. ಆದರೆ ಸದ್ಯ ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾಗಿರುವ ಕಾರಣಕ್ಕೆ ಮುನ್ನೆಚ್ಚರಿಕೆಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Exit mobile version