ಕೊರೊನಾ ಹಿನ್ನೆಲೆ: ರಾಜ್ಯದ 5 ಜಿಲ್ಲಾ ನ್ಯಾಯಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ

ಬೆಂಗಳೂರು, ಮೇ. 04: ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 5 ಜಿಲ್ಲಾ ನ್ಯಾಯಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ಅಧಿಸೂಚನೆ ಹೊರಡಿಸಿದೆ.

10,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಿರುವ ರಾಜ್ಯದ ಐದು ಜಿಲ್ಲೆಗಳಾದ ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಬಳ್ಳಾರಿಗಳಲ್ಲಿ ವಕೀಲರು, ದಾವೆದಾರರು, ಖುದ್ದು ಹಾಜರಾಗಬೇಕಾದ ವ್ಯಕ್ತಿಗಳು ಹಾಗೂ ಸಂದರ್ಶಕರಿಗೆ ನ್ಯಾಯಾಲಯದ ಪ್ರವೇಶ ನಿರ್ಬಂಧಿಸಲಾಗಿದೆ.

ಅಲ್ಲದೇ, ಇ- ಫೈಲಿಂಗ್ ಮೂಲಕವೇ ಅರ್ಜಿ ಸಲ್ಲಿಸಿ, ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣ ಆಲಿಸುವುದು, ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯ ದಾಖಲಿಸಲು ಆರೋಪಿಯ ಭೌತಿಕ ಹಾಜರಿಯನ್ನು ನಿಷೇಧಿಸಲಾಗಿದೆ. ಆರೋಪಿಯ ಭೌತಿಕ ಉಪಸ್ಥಿತಿ ಬಯಸಿದ ಪ್ರಕರಣಗಳಲ್ಲಿ ಮಾತ್ರ ವಕೀಲರ ಭೌತಿಕ ಹಾಜರಾತಿಗೆ ಅನುಮತಿಸಲಾಗುತ್ತದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಮುಖ್ಯ ನ್ಯಾಯಾಧೀಶರು ಕಡಿಮೆ ಸಿಬ್ಬಂದಿ ಬಳಸಿಕೊಳ್ಳಬೇಕು ಮತ್ತು ಹೊರಗಿನ ಪ್ರದೇಶಗಳಿಗೆ ಪ್ರಯಾಣಿಸಬೇಕಾದ ಸಿಬ್ಬಂದಿಯನ್ನು ಸೇವೆಗೆ ಬಳಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಧೀಶರು ಜಿಲ್ಲಾ ಕೇಂದ್ರ ಕಚೇರಿಯಲ್ಲಿ ವಾಸಿಸುವ ನ್ಯಾಯಾಂಗ ಅಧಿಕಾರಿಗಳಿಂದ ಮಾತ್ರ ಜಾಮೀನು ಅರ್ಜಿಗಳನ್ನು ಆಲಿಸಲು ವ್ಯವಸ್ಥೆ ಮಾಡಬೇಕು. ಮರುವಿಚಾರಣೆ ಅಗತ್ಯವಿರುವ ಎಲ್ಲಾ ಪ್ರಕರಣಗಳನ್ನು ಆಯಾ ಸ್ಥಳದ ನ್ಯಾಯಿಕವ್ಯಾಪ್ತಿ ಇರುವ ನ್ಯಾಯಾಧೀಶರು ಪರಿಗಣಿಸಬೇಕು. ಎಲ್ಲಾ ಜಾಮೀನು ಅರ್ಜಿಗಳು/ ಮನವಿಗಳನ್ನು ಇ-ಫೈಲಿಂಗ್ ಮೂಲಕ ಮಾತ್ರ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ನಿರ್ದೇಶಿಸಲಾಗಿದೆ.

Exit mobile version