ಭಾರತ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಮೇಲೆ ಕೊರೊನಾ ಕರಿನೆರಳು: ಜು.13ರ ಬದಲಿಗೆ ಜು.18ರಿಂದ ಸರಣಿ ಆರಂಭ

ಕೊಲಂಬೋ, ಜು. 10: ಪ್ರವಾಸಿ ಭಾರತ ಹಾಗೂ ಅತಿಥೇಯ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಗೆ ಕೊರೊನಾ ಕಂಟಕ ಎದುರಾಗಿದೆ. ಇದರ ಪರಿಣಾಮ ಉಭಯ ತಂಡಗಳ ನಡುವೆ ಜು.13ರಿಂದ ಆರಂಭವಾಗಬೇಕಿದ್ದ ಸರಣಿ ಇದೀಗ ಜು.18ರಿಂದ ಆರಂಭ ಆಗಲಿದೆ.

ಕೊರೊನಾ ಆತಂಕದ ಹಿನ್ನೆಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ಸಿ) ಜಂಟಿ ತೀರ್ಮಾನದೊಂದಿಗೆ ಉಭಯ ತಂಡಗಳ ನಡುವಿನ ಕ್ರಿಕೆಟ್ ಸರಣಿಯನ್ನು ಜು.18ಕ್ಕೆ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಎರಡು ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಜು.18ಕ್ಕೆ ನಡೆಯಲಿದ್ದು, ಜು.20 ಹಾಗೂ 23ರಂದು ಎರಡು ಮತ್ತು ಮೂರನೇ ಪಂದ್ಯಗಳು ನಡೆಯಲಿದೆ.‌ ಈ ಎಲ್ಲಾ ಪಂದ್ಯಗಳು ಕೊಲಂಬೋ ದಲ್ಲೇ ನಡೆಯಲಿದೆ. ಇನ್ನೂ ಇತ್ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಜು.25, 27 ಹಾಗೂ 29ರಂದು ನಡೆಯಲಿದೆ.

ಶ್ರೀಲಂಕಾ ಕ್ರಿಕೆಟ್ ತಂಡದ ಡೇಟಾ ವಿಶ್ಲೇಷಕ ಜಿಟಿ ನಿರೋಶನ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆತಂಕ ಹೆಚ್ಚಾಗಿದೆ. ಈ ವಿಷಯವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಜುಲೈ 9ರಂದು ಸ್ಪಷ್ಟಪಡಿಸಿದೆ. ಈ ಹಿಂದೆ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಗೆ ಕೋವಿಡ್ ತಗುಲಿತ್ತು. ಇದರ ಬೆನ್ನಲ್ಲೇ ತಂಡದ ಡಾಟಾ ವಿಶ್ಲೇಷಕರಿಗೂ ಕೋವಿಡ್-19 ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಪಿಸಿಆರ್ ಟೆಸ್ಟ್ ವರದಿಯಲ್ಲಿ ಕೊರೋನಾ ಸೋಂಕು ಡೇಟಾ ವಿಶ್ಲೇಷಕರಿಗೆ ತಗುಲಿರುವುದು ದೃಢಪಟ್ಟಿತ್ತು.

Exit mobile version