ಕೊರೋನಾ: ನಾಲ್ಕು ರಾಜ್ಯಗಳ ಸಿಎಂಗೆ ಕರೆಮಾಡಿ ಮಾಹಿತಿ ಪಡೆದ ಪಿಎಂ

ನವದೆಹಲಿ, ಮೇ. 08: ದೇಶದಲ್ಲಿ ಸೋಂಕು ಹರಡುವಿಕೆ ಮೀತಿ ಮೀರಿದ್ದು, ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ಕಳೆದ ಬಾರಿ ಸೋಂಕು ನಿಯಂತ್ರಣಕ್ಕೆ ದೇಶವಿಡೀ ಲಾಕ್​ಡೌನ್​ ಘೋಷಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ಬಾರಿ ಸೋಂಕು ನಿಯಂತ್ರಣದ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ವಹಿಸಿದ್ದಾರೆ. ಈ ನಡುವೆ ಕೆಲ ರಾಜ್ಯಗಳಲ್ಲಿ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುದ್ದು, ಸಾಕಷ್ಟು ಆತಂಕ ತಂದಿದೆ. ಇದೇ ಹಿನ್ನಲೆ ಸೋಂಕು ಹೆಚ್ಚಳಗೊಂಡಿರುವ ನಾಲ್ಕು ರಾಜ್ಯಗಳ ಕುರಿತು ಇಂದು ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ, ತಮಿಳುನಾಡು ನೂತನ ಸಿಎಂ ಎಂ. ಕೆ ಸ್ಟಾಲಿನ್​, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌವ್ಹಣ್​ ಮತ್ತು ಹಿಮಾಚಲ್​ ಪ್ರದೇಶ ಸಿಎಂ ಜೈ ರಾಮ್​ ಠಾಕೂರ್​ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ ಕೋವಿಡ್​ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ದೇಶದಲ್ಲಿಯೇ ಅತಿಹೆಚ್ಚು ಸೋಂಕಿಗೆ ತುತ್ತಾಗಿದ್ದ ಮೊದಲ ರಾಜ್ಯ ಮಹಾರಾಷ್ಟ್ರ. ವಾಣಿಜ್ಯ ನಗರಿಯಲ್ಲಿ ಸೋಂಕು ಮಿತಿ ಮೀರಿದ ಹಿನ್ನಲೆ ರಾಜ್ಯದಲ್ಲಿ ಲಾಕ್​ಡೌನ್​ನಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಉದ್ಧವ್​ ಠಾಕ್ರೆ ಮುಂದಾಗಿದ್ದರು. ಅಲ್ಲಿನ ರಾಜ್ಯ ಸರ್ಕಾರ ಕೈ ಗೊಂಡ ಕ್ರಮದಿಂದಾಗಿ ಅಂಕೆ ಮೀರಿದ್ದ ಸೋಂಕು ಈಗ ನಿಯಂತ್ರಣಕ್ಕೆ ಬಂದಿದೆ. ಆದರೆ, ರಾಜ್ಯದಲ್ಲಿ ಹೊಸ ಸೋಂಕಿನ ಪ್ರಕರತ ಪತ್ತೆಯಾಗುವ ಬಗ್ಗೆ ಕೇಂದ್ರ ಸಚಿವರು ತಿಳಿಸಿದ್ದರು. ಈ ಹಿನ್ನಲೆ ಈ ಕುರಿತು ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಕೋವಿಡ್​ ಲಸಿಕೆಗಾಗಿ ತಮ್ಮದೇ ಆದ ಹೊಸ ಆ್ಯಪ್​ ಅನ್ನು ಅಭಿವೃದ್ಧಿಪಡಿಸುವ ಬಗ್ಗೆ ಠಾಕ್ರೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಈ ಬಗ್ಗೆ ಕೂಡ ಮಾತುಕತೆ ನಡೆದಿದೆ.

ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಕುರಿತು ಮಧ್ಯ ಪ್ರದೇಶ ಸಿಎಂ ಕಾರ್ಯಕ್ಕೆ ಇದೇ ವೇಳೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕರ್ಫ್ಯೂ ಕುರಿತು ಚರ್ಚೆ ನಡೆಸಿದರು. ಈ ವೇಳೆ ರಾಜ್ಯಕ್ಕೆ ಬೇಕಾದ ಸಹಾಯದ ಕುರಿತು ಕೇಂದ್ರ ಭರವಸೆ ನೀಡಿದೆ.

ಹಿಮಾಚಲ ಪ್ರದೇಶದಲ್ಲಿ ಆಕ್ಸಿಜನ್​ ಪೂರೈಕೆ ಮತ್ತು ಲಸಿಕೆ ವಿತರಣೆ ಕಾರ್ಯದ ಕುರಿತು ಪ್ರಧಾನಿ ಮೋದಿ ಮಾಹಿತಿ ಪಡೆದರು. ಸೋಂಕಿನ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಬೇಕಾದ ನೆರವನ್ನು ನೀಡುವುದಾಗಿ ಪ್ರಧಾನಿ ಮೋದಿ ಆಶ್ವಾಸನೆ ನೀಡಿದ್ದು, ಈ ಕುರಿತು ಟ್ವೀಟ್​ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಸೋಂಕು ನಿಯಂತ್ರಣಕ್ಕೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೂಡ ಪ್ರಧಾನಿ ಮೋದಿ ವಿವರಣೆ ಪಡೆದರು

Exit mobile version