ಕೊರೋನಾ ಸರಪಳಿ ತುಂಡರಿಸಲು ದೆಹಲಿಯಲ್ಲಿ ವೀಕೆಂಡ್ ಕಫ್ಯೂ ಜಾರಿ

ಹೊಸದಿಲ್ಲಿ, ಏ. 15: ಕೊರೊನಾ 2ನೇ ಅಲೆ ಭೀತಿಯಿಂದ ನಲುಗಿರುವ ರಾಜಧಾನಿ ದಿಲ್ಲಿಯಲ್ಲಿ ಏ.17ರಿಂದ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಘೋಷಿಸಿದ್ದಾರೆ.

ಹೊಸ ನಿಯಮಾವಳಿಯಿಂದ ರಾಜಧಾನಿ ದಿಲ್ಲಿ ಶನಿವಾರ ಹಾಗೂ ಭಾನುವಾರ ಸಂಪೂರ್ಣ ಸ್ಥಬ್ದವಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು, ಗುರುವಾರ ದೆಹಲಿ ಗವರ್ನರ್‌ ಅನಿಲ್‌ ಬೈಜಾಲ್‌ ಅವರೊಂದಿಗೆ ಚರ್ಚೆ ನಡೆಸಿದ್ದು, ಲಾಕ್‌ಡೌನ್‌ ಹೊರತಾಗಿ ಕೈಗೊಳ್ಳಬೇಕಿರುವ ನಿಷೇಧಗಳ ಬಗ್ಗೆ ಸಲಹೆ ಪಡೆದರು.

ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಎಂ ಅರವಿಂದ್‌ ಕೇಜ್ರಿವಾಲ್‌, ಏ.17ರಿಂದ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ. ಹೀಗಾಗಿ ಸಾರ್ವಜನಿಕರು ವಾರಾಂತ್ಯದಲ್ಲಿ ಅನಗತ್ಯವಾಗಿ ಓಡಾಡದೆ ತಮ್ಮ ಮನೆಗಳಲ್ಲಿ ಇರಬೇಕೆಂದು ಮನವಿ ಮಾಡಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಮದುವೆ ಹಾಗೂ ಅನುಮತಿ ನೀಡಿರುವ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಕರ್ಫ್ಯೂ ಪಾಸ್‌ ವಿತರಸಲಾಗುವುದು. ಉಳಿದಂತೆ ಜಿಮ್‌ಗಳು, ಮಾಲ್‌ಗಳು ಹಾಗೂ ಈಜುಕೊಳಗಳನ್ನು ಬಂದ್‌ ಮಾಡಬೇಕು. ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್‌ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ.

ರಾಜಧಾನಿ ದಿಲ್ಲಿಯಲ್ಲಿ ಬುಧವಾರ 17,282 ಹೊಸ ಕೋವಿಡ್‌ ಪ್ರಕರಣಗಳು ದಾಕಲಾಗಿವೆ. ಈ ಅಂಕಿಸಂಖ್ಯೆಗಳು ದಿಲ್ಲಿಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮೊದಲ ಅಲೆಯಿಂದ ತತ್ತರಿಸಿದ್ದ ರಾಜಧಾನಿಯು ಎರಡನೇ ಅಲೆಗೆ ಸಿಲುಕಿ ನಲುಗಿದೆ. ಅಲ್ಲದೇ ಮಹಾಮಾರಿಗೆ ಬುಧವಾರ ಸಹ ನೂರಕ್ಕೂ ಹೆಚ್ಚು ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದರು.

Exit mobile version