ಮೌಂಟ್ ಎವರೆಸ್ಟ್ ಗೂ ಕಾಲಿಟ್ಟ ಕೊರೋನಾ

ಕಠ್ಮಂಡು, ಏ. 23: ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪವನ್ನು ಪಡೆಯುತ್ತಿದ್ದು, ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿರುವ ಎವರೆಸ್ಟ್ ಪರ್ವತಕ್ಕೂ ಕೊರೊನಾ ಸೋಂಕು ಕಾಲಿಟ್ಟಿರುವ ಸುದ್ದಿ ಹೊರಬಿದ್ದಿದೆ. ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಿದ ಬೆನ್ನಲ್ಲೇ ನಾರ್ವೇ ಮೂಲದ ಪರ್ವತಾರೋಹಿ ಒಬ್ಬರಲ್ಲಿ ನಿನ್ನೆ (ಏಪ್ರಿಲ್ 23) ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಮೌಂಟ್​ ಎವರೆಸ್ಟ್​ಗೂ ಕೊರೊನಾ ಲಗ್ಗೆ ಇಟ್ಟಂತಾಗಿದೆ.

ನೆಸ್​ ಎಂಬ ಪರ್ವತಾರೋಹಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆತನನ್ನು ಹೆಲಿಕಾಪ್ಟರ್ ಮೂಲಕ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಸ್​, ನನ್ನಿಂದಾಗಿ ಪರ್ವತದ ತುದಿಯಲ್ಲಿದ್ದ ಬೇರೆಯವರಿಗೆ ಸೋಂಕು ಹಬ್ಬದಿರಲಿ ಎಂದೇ ಬಯಸುತ್ತೇನೆ. 8,000 ಮೀಟರ್​ಗಿಂತಲೂ ಎತ್ತರದಲ್ಲಿರುವ ಎಲ್ಲರನ್ನೂ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಅಸಾಧ್ಯದ ಮಾತು. ಮೊದಲೇ ಆ ಪ್ರದೇಶದಲ್ಲಿ ಉಸಿರಾಟದ ಸಮಸ್ಯೆ ಇರುತ್ತದೆ. ಅಂಥದ್ದರಲ್ಲಿ ಕೊರೊನಾ ಕಾಣಿಸಿಕೊಂಡರೆ ತುಂಬಾ ಕಷ್ಟ ಎಂದು ತಿಳಿಸಿದ್ದಾರೆ.

ಇದರ ಮಧ್ಯೆ ಇನ್ನೂ ಹಲವರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆಯಿದ್ದು, ಸೋಂಕು ಹಬ್ಬುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಪರ್ವತಾರೋಹಣವನ್ನು ಈ ಬಾರಿ ಸ್ಥಗಿತಗೊಳಿಸುತ್ತಿರುವುದಾಗಿ ಅಯೋಜಕರು ತಿಳಿಸಿದ್ದಾರೆ.

Exit mobile version