ದೇಶದಲ್ಲಿ ಕೊರೋನಾ ಆರ್ಭಟ: ಕಳೆದ ೪ ತಿಂಗಳಲ್ಲೇ ಅತೀ ಹೆಚ್ಚು ಕೇಸ್ ದಾಖಲು

ದೆಹಲಿ, ಮಾ. 18: ದೇಶದಲ್ಲಿ ಕೊರೊನಾ ಆರ್ಭಟ ಮತ್ತೆ ಆರಂಭವಾಗಿದ್ದು, ಕಳೆದ 24ಗಂಟೆಗಳಲ್ಲಿ ಬರೋಬ್ಬರಿ 35,871 ಕೊರೊನಾ ಕೇಸ್​ಗಳು ದಾಖಲಾಗಿವೆ. ಕಳೆದ 102 ದಿನಗಳಲ್ಲಿ ಅಂದರೆ ಸುಮಾರು 4 ತಿಂಗಳಲ್ಲಿ ಮೊದಲ ಬಾರಿಗೆ ಒಂದು ದಿನದಲ್ಲಿ ಇಷ್ಟೊಂದು ಸಂಖ್ಯೆಯ ಪ್ರಕರಣಗಳು ದಾಖಲಾಗಿರುವುದು. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 1.14 ಕೋಟಿಗೆ ತಲುಪಿದ್ದು, ಸಕ್ರಿಯ ಪ್ರಕರಣಗಳು 2.52 ಲಕ್ಷಕ್ಕೂ ಹೆಚ್ಚು ಇವೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 172 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಸೋಂಕಿನಿಂದ ಒಟ್ಟೂ ಸಾವನ್ನಪ್ಪಿದವರ ಸಂಖ್ಯೆ 1.59 ಲಕ್ಷ ಆಗಿದೆ. ಇಂದು ದಾಖಲಾದ 35,871 ಕೇಸ್​ಗಳಲ್ಲಿ ಮಹಾರಾಷ್ಟ್ರದಿಂದಲೇ 23,179 ಪ್ರಕರಣಗಳು (ಶೇ.65) ವರದಿಯಾಗಿರುವುದು ಮಹಾರಾಷ್ಟಕ್ಕೆ ಆತಂಕ ಸೃಷ್ಟಿ ಮಾಡಿದೆ. ಎರಡನೇ ಸ್ಥಾನದಲ್ಲಿ ಪಂಜಾಬ್ (2,039)​ ರಾಜ್ಯವಿದೆ.

ದೇಶದಲ್ಲಿ ಮಾರ್ಚ್​ 1ರಿಂದ ಕೊರೊನಾ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಕೆಲವು ರಾಜ್ಯಗಳ ಸ್ಥಳೀಯಾಡಳಿತಗಳು ಕೊರೊನಾವನ್ನು ಹತ್ತಿಕ್ಕಲು ಮೊದಲಿನಂತೆ ಹೋಂ ಕ್ವಾರಂಟೈನ್​ ವ್ಯವಸ್ಥೆಯನ್ನೂ ಜಾರಿಗೊಳಿಸಿವೆ. ಗುಜರಾತ್​ನ ಸೂರತ್​ ಮುನ್ಸಿಪಲ್ ಕಾರ್ಪೋರೇಶನ್, ಹೊರಗಿನಿಂದ ಯಾರೇ ಬಂದರೂ ಅವರಿಗೆ ಏಳು ದಿನಗಳ ಹೋಂ ಕ್ವಾರಂಟೈನ್​ ಕಡ್ಡಾಯಗೊಳಿಸಿದೆ.

Exit mobile version