ಕೊರೋನಾ ಎರಡನೇ ಅಲೆಯ ಅಬ್ಬರ: ೧.೮೪ ಲಕ್ಷ ಪ್ರಕರಣ ಪತ್ತೆ

ನವದೆಹಲಿ, ಏ. 14: ದೇಶದಲ್ಲಿ ಮಂಗಳವಾರ 1,84,372 (1.84 ಲಕ್ಷ) ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.38 ಕೋಟಿಗೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊವಿಡ್​ನಿಂದ ಸಾವಿಗೀಡಾದವರ ಸಂಖ್ಯೆ 1,027 ಆಗಿದ್ದು, ಒಟ್ಟು ಸಾವಿನ ಸಂಖ್ಯೆ 1,72,085ಕ್ಕೆ ತಲುಪಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 13,65,704 ಆಗಿದ್ದು 1,23,36,036 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 11,11,79,578 ಮಂದಿ ಕೊವಿಡ್ ಲಸಿಕೆ ಪಡೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸೋಂಕು ನಿಯಂತ್ರಣಕ್ಕಾಗಿ ಜನತಾ ಕರ್ಫ್ಯೂ ಜಾರಿಯಾಗಿದೆ. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ‘ರಾಜ್ಯದಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಬ್ರೇಕ್​ ದಿ ಚೈನ್ ಅಭಿಯಾನ’ ಅರಂಭವಾಗಲಿದೆ ಎಂದು ಘೋಷಿಸಿದರು.

ದೆಹಲಿಯಲ್ಲಿ ಮಂಗಳವಾರ ಅತೀ ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾಗಿದೆ. ಒಂದೇ ದಿನ 13,468 ಪ್ರಕರಣಗಳು ಪತ್ತೆಯಾಗಿದ್ದು 81ಮಂದಿ ಸಾವಿಗೀಡಾಗಿದ್ದಾರೆ. ಮುಂಬೈನಲ್ಲಿ ಒಂದೇ ದಿನ 9,986 ಮಂದಿ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 6,387 ಪ್ರಕರಣಗಳು ವರದಿ ಆಗಿವೆ. ಚೆನ್ನೈನಲ್ಲಿ 2,105, ಕೊಲ್ಕತ್ತದಲ್ಲಿ1,271 ಪ್ರಕರಣಗಳು ಪತ್ತೆಯಾಗಿದೆ. ಮಂಗಳವಾರ ಪಾಸಿಟಿವಿಟಿ ದರ ಶೇ 13.14ಕ್ಕೇರಿದೆ. ಸೋಮವಾರ ಇದು 12.44 ಆಗಿತ್ತು.

Exit mobile version