ಕೊರೊನಾ ಸಮರ: ಡಿಆರ್​ಡಿಓ ಅಭಿವೃದ್ಧಿಪಡಿಸಿದ 2ಡಿಜಿ ಔಷಧ ಬಿಡುಗಡೆ

ನವದೆಹಲಿ, ಮೇ. 17: ಕೊರೋನಾ ಮಟ್ಟ ಹಾಕಲು ಪ್ರತಿದಿನ ಸಾವಿರಾರು ಪ್ರಯೋಗಗಳು ನಡೆಯುತ್ತಿದ್ದು, ಭಾರತದಲ್ಲಿ ಡಿಆರ್ ಡಿಒ ಅಭಿವೃದ್ಧಿಪಡಿಸಿರುವ 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ) ಔಷಧವನ್ನು ಇಂದು ಅಧಿಕೃತವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಿಡುಗಡೆಮಾಡಿದ್ದಾರೆ.

ಕೊವಿಡ್ ಸೋಂಕು ನಿರೋಧಕವಾಗಿ ಕೆಲಸ ಮಾಡುವ ಸಾಮರ್ಥ್ಯವುಳ್ಳ ಈ ಔಷಧವನ್ನು ಹೈದರಾಬಾದ್​ನ ಡಾ.ರೆಡ್ಡಿಸ್ ಲ್ಯಾಬ್​ನ ಸಹಯೋಗದಲ್ಲಿ ಡಿಆರ್​ಡಿಒ ಅಭಿವೃದ್ಧಿಪಡಿಸಿದ್ದು, ಇದು ಕೊವಿಡ್ ವಿರುದ್ಧದ ಹೋರಾಟದಲ್ಲಿ ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿಯೂ ಭರವಸೆ ನೀಡಬಲ್ಲ ಫಲಿತಾಂಶವನ್ನು ನೀಡಿರುವ 2ಡಿಜಿ, ಪೌಡರ್​ ರೂಪದಲ್ಲಿ ಇರಲಿದ್ದು ನೀರಿನ ಜತೆ ಬೆರೆಸಿ ಸೇವಿಸಬಹುದಾಗಿದೆ.

ಈ ಬಗ್ಗೆ ಮಾತನಾಡಿರುವ ಡಾ.ಹರ್ಷವರ್ಧನ್, 2ಡಿಜಿ ಔಷಧವು ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ಭರವಸೆ ಇದ್ದು, ಸೋಂಕಿತರು ಗುಣಮುಖರಾಗುವ ಅವಧಿ ಹಾಗೂ ಆಕ್ಸಿಜನ್​ ಅವಲಂಬನೆಯನ್ನು ಇದು ಕಡಿಮೆ ಮಾಡಲಿದೆ. ಬಹುಮುಖ್ಯವಾಗಿ ಇದು ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಆಶಾದಾಯಕವಾಗಲಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಜಗತ್ತಿಗೆ ಇಂತಹ ಭರವಸೆಯನ್ನು ನೀಡಿದ ಡಿಆರ್​ಡಿಓ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

2ಡಿಜಿ ಔಷಧ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನ (ಡಿಸಿಜಿಐ) ಅನುಮತಿ ನೀಡಿದ್ದು, ಕೊರೊನಾ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪುವುದನ್ನು ತಡೆಗಟ್ಟಲು ಸಹಕರಿಸಲಿದೆ. ಅಲ್ಲದೇ, ಇದರ ಬಳಕೆಯಿಂದ ಕೊವಿಡ್ 19 ಸೋಂಕಿತರು ಆಸ್ಪತ್ರೆಗೆ ಸೇರುವ ಪ್ರಮಾಣವೂ ಇಳಿಮುಖವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

Exit mobile version