ಕೊರೊನಾಗೆ ಸಡ್ಡು ಹೊಡೆದ ದಸರಾ ಗೊಂಬೆಗಳ ವೈಯಾರ

ಮೈಸೂರು, 23: ನಾಡಹಬ್ಬ ದಸರಾ ಬಂತೆಂದರೆ ಮೈಸೂರಿಗರಿಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ನವರಾತ್ರಿಯ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ಗೊಂಬೆ ಹಬ್ಬದ ಆಚರಣೆಯಲ್ಲಿ ಮನೆ ಮನೆಗಳಲ್ಲೂ ಗೊಂಬೆಗಳದ್ದೇ ದರ್ಬಾರು.

ದಸರೆಯ ವಿಶೇಷತೆಗಳಲ್ಲಿ ಒಂದಾಗಿರುವ ಗೊಂಬೆಗಳನ್ನು ಪ್ರತಿಷ್ಠಾಪಿಸಿ, ಶೃಂಗರಿಸುವುದು ಕಿರಿಯರಿಂದ ಹಿರಿಯರವರೆಗೂ ಖುಷಿಯ ಸಂಗತಿ. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಈ ಪದ್ಧತಿ ನಂತರ ಮೈಸೂರು ಅರಸರ ಕಾಲದಲ್ಲಿ ಮೈಸೂರು ಪ್ರಾಂತ್ಯಕ್ಕೆ ಕಾಲಿಟ್ಟಿತು. ಹೀಗಾಗಿ ಅರಸರ ಕಾಲದಲ್ಲಿ ಆರಂಭವಾದ ಗೊಂಬೆ ಕೂರಿಸುವ ಪದ್ಧತಿ, ಮೈಸೂರು ಪ್ರಾಂತ್ಯದಲ್ಲಿ ಇಂದಿಗೂ ತನ್ನ ಜೀವಂತಿಕೆ ಉಳಿಸಿಕೊಂಡಿದೆ.

ಧಾರ್ಮಿಕ ಚೌಕಟ್ಟು ಇದೆ:
ಸೃಜನಶೀಲತೆಯ ಸಂಕೇತದಂತಿರುವ ದಸರಾ ಗೊಂಬೆಗಳನ್ನು ಕೂರಿಸುವ ಆಚರಣೆ ನವರಾತ್ರಿಯ ಸಾಂಸ್ಕೃತಿಕ ಉತ್ಸವದ ಭಾಗದಂತೆ ಗೋಚರಿಸಿದರೂ, ಇದಕ್ಕೆ ಅದರದ್ದೇ ಆದಂತಹ ಧಾರ್ಮಿಕ ಚೌಕಟ್ಟು ಸಹ ಇದೆ. ಹೀಗಾಗಿ ದಸರಾ ಗೊಂಬೆಗಳ ಪ್ರತಿಷ್ಠಾಪನೆ ವೇಳೆ ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಸಂಧಾನ, ನವದುರ್ಗೆಯರ ವೈಭಯ ಹೀಗೆ ಹಲವು ಕಥೆಗಳನ್ನು ಹೇಳುವ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಇವೆಲ್ಲದರ ಜೊತೆಗೆ ರಾಜ-ರಾಣಿ ಗೊಂಬೆಗಳನ್ನು ಅಗ್ರಸ್ಥಾನದಲ್ಲಿ ಕೂರಿಸಿ, ನವರಾತ್ರಿಯ ಪ್ರತಿನಿತ್ಯವೂ ಪೂಜಿಸಲಾಗುತ್ತದೆ.

ಮೈಸೂರಿನಲ್ಲಿ ಆಚರಣೆ ಜೀವಂತ:
ಅನಾದಿ ಕಾಲದಿಂದಲೂ ನಡೆದು ಬಂದಿರುವ ದಸರಾ ಗೊಂಬೆ ಕೂರಿಸುವ ಪದ್ಧತಿ ಆಧುನಿಕತೆಯ ಭರಾಟೆಯ ನಡೆವೆಯೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಮೈಸೂರಿನ ಬಹುತೇಕ ಮನೆಗಳಲ್ಲಿ ನವರಾತ್ರಿ ವೇಳೆ ಹತ್ತು ದಿನಗಳವರೆಗೂ ದಸರಾ ಗೊಂಬೆಗಳನ್ನು ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತದೆ. ಹೀಗಾಗಿ ಅಂಬಾವಿಲಾ ಅರಮನೆಯಲ್ಲಿ ದಸರಾ ದರ್ಬಾರ್ಗೆ ಚಾಲನೆ ಸಿಗುತ್ತಿದ್ದಂತೆ ಮನೆಗಳಲ್ಲೂ ದಸರಾ ಸಂಭ್ರಮ ಶುರುವಾಗಲಿದೆ. ನಂತರ ಜಂಬೂಸವಾರಿ ದಿನದಂದು ಮನೆಗಳಲ್ಲಿ ಇರಿಸಲಾಗುವ ಪಟ್ಟದ ಗೊಂಬೆಗಳ ವಿಸರ್ಜನೆಯಾಗುತ್ತದೆ.

ಆಚರಣೆಗೆ ಆಧುನಿಕ ಸ್ಪರ್ಶ:
ಅರಸರ ಕಾಲದಿಂದ ಶುರುವಾಗಿರುವ ದಸರಾ ಗೊಂಬೆಗಳನ್ನು ಕೂರಿಸುವ ಪದ್ಧತಿ, ವರ್ಷದಿಂದ ವರ್ಷಕ್ಕೆ ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿದೆ. ಹೀಗಾಗಿ ಪುರಾತನ ಕಾಲದ ಕಥೆಗಳನ್ನು ಹೇಳುವ ಗೊಂಬೆಗಳ ಜೊತೆಗೆ ಇತ್ತೀಚಿನ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಗೊಂಬೆಗಳನ್ನು ಬಹುತೇಕ ಮನೆಗಳಲ್ಲಿ ನೋಡಬಹುದಾಗಿದೆ.

ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ವರ್ಷ ಅವರ ಮನೆಯಲ್ಲಿ ಗೊಂಬೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಕಳೆದ 16 ವರ್ಷದಿಂದಲೂ ದಸರೆಯಲ್ಲಿ ಗೊಂಬೆಗಳನ್ನು ಕೂರಿಸುವ ಆಚರಣೆ ರೂಡಿಸಿಕೊಂಡಿರುವ ಇವರು, ದಸರೆಯ ಸಂಭ್ರಮ ಬಿಂಬಿಸುವ ಗೊಂಬೆಗಳ ಜತೆಗೆ ಪುರಾಣ ಕಥೆಗಳನ್ನು ಹೇಳುವ ಗೊಂಬೆಗಳನ್ನು ಇರಿಸಲಾಗಿದೆ.

Exit mobile version